ನವದೆಹಲಿ: 2002ರ ಗುಜರಾತ್ ಗಲಭೆಯ ಫೋರ್ಜರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ಗೆ ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ. ಸುಪ್ರೀಂಕೋರ್ಟ್ನಲ್ಲಿ ಗುಜರಾತ್ ಸರ್ಕಾರದ ಪರ ವಾದ ಮಂಡಿಸಿದ ವಕೀಲರು, ಸೆಟಲ್ವಾಡ್‌ಗೆ ಜಾಮೀನು ಮಂಜೂರು ಮಾಡದಂತೆ ಕೋರಿದರು.
ಎರಡೂ ಕಡೆ ವಾದ ಆಲಿಸಿದ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಎ.ಎಸ್.ಬೋಪಣ್ಣ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಅವರಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಈ ಮೂಲಕ ಸೆಟಲ್ವಾಡ್ ನಿರಾಳರಾಗಿದ್ದಾರೆ. ವಾದ ಆಲಿಸಿದ ಪೀಠ ಹೇಳಿದ್ದಿಷ್ಟು. "ಪ್ರಕರಣದ ಹೆಚ್ಚಿನ ಸಾಕ್ಷ್ಯಗಳು ಸಾಕ್ಷ್ಯಚಿತ್ರದ ಸಾಕ್ಷ್ಯಗಳಾಗಿವೆ, ಇದು ತನಿಖಾ ಸಂಸ್ಥೆಯ ಬಳಿ ಈಗಾಗಲೇ ಲಭ್ಯ ಇದೆ. ಆರೋಪಪಟ್ಟಿ ಈಗಾಗಲೇ ಸಲ್ಲಿಸಲಾಗಿದೆ. ಹೀಗಾಗಿ ಅವರನ್ನು ಕಸ್ಟಡಿಗೆ ಪಡೆಯುವ ಅಗತ್ಯವಿಲ್ಲ. ಮೇಲ್ಮನವಿದಾರರು ಜಾಮೀನಿನ ಮೇಲೆ ಮುಂದುವರಿಸಲು ನಿರ್ದೇಶಿಸಲಾಗಿದೆ." ಎಂದು ಆದೇಶಿಸಿದೆ.
ಸೆಟಲ್ವಾಡ್ ಜಾಮೀನು ನಿರಾಕರಿಸುವ ಹೈಕೋರ್ಟ್ ಆದೇಶದಲ್ಲಿನ ಅಂಶಗಳನ್ನು ಸುಪ್ರೀಂ ಕೋರ್ಟ್ ಗಮನಿಸಿದೆ. ಈಗಾಗಲೇ ಸಾಮಾಜಿಕ ಕಾರ್ಯಕರ್ತೆ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಕಸ್ಟೋಡಿಯಲ್ ವಿಚಾರಣೆ ಪೂರ್ಣಗೊಂಡಿರುವುದರಿಂದ ಜಾಮೀನು ನೀಡಬೇಕು ಎಂದು ಹೇಳಿದೆ. ಸೆಟಲ್ವಾಡ್ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದ್ದು, ತಮ್ಮ ಕಕ್ಷಿದಾರರು ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ ಅಥವಾ ಯಾರ ಮೇಲೂ ಪ್ರಭಾವ ಬೀರಿಲ್ಲ ಮತ್ತು ಓಡಿಹೋಗುವ ಅಥವಾ ಸಾಕ್ಷ್ಯವನ್ನು ಹಾಳುಮಾಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ವಾದಿಸಿದರು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದಾಗಿನಿಂದ "ಅವರು ತಮ್ಮ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲ, ಈಗ ಅವರ ಜಾಮೀನನ್ನು ಏಕೆ ನಿರಾಕರಿಸಬೇಕು " ಎಂದು ಸಿಬಲ್ ಪ್ರಶ್ನಿಸಿದರು.
ಇನ್ನು ಸರ್ಕಾರದ ಪರ ಎಎಸ್‌ಜಿ ರಾಜು ವಾದ ಮಂಡಿಸಿದರು. ಸೆಟಲ್ವಾಡ್ ಅವರು "ಗಂಭೀರ ಅಪರಾಧ" ಮಾಡಿದ್ದಾರೆ ಎಂದು ಒತ್ತಿ ಹೇಳಿದರು. ಕಾಂಗ್ರೆಸ್ ಮುಖಂಡರೊಬ್ಬರಿಂದ ಸೆಟಲ್ವಾಡ್ 30 ಲಕ್ಷ ರೂಪಾಯಿ ಪಡೆದಿದ್ದಾರೆ ಎಂಬ ಆರೋಪ ಚಾರ್ಜ್‌ಶೀಟ್‌ನಲ್ಲಿ ದಾಖಲಾಗಿದೆ ಎಂದು ಪೀಠದ ಗಮನಕ್ಕೆ ತಂದರು. ಈ ವೇಳೆ ಮಧ್ಯ ಪ್ರವೇಶಿಸಿದ ಪೀಠ, ಅವರನ್ನು ಬಂಧಿಸುವ ಅವಶ್ಯಕತೆಯಿದೆ ಎಂದು ಎಫ್‌ಐಆರ್ ದಾಖಲಾದ ನಂತರ ಕಳೆದ ವರ್ಷ ಜೂನ್‌ನಿಂದ ಏನು ತನಿಖೆ ನಡೆಸಲಾಗಿದೆ ಹಾಗೂ 2008-2011 ರಿಂದ ನೀವು ಏನು ಮಾಡುತ್ತಿದ್ದೀರಿ ಎಂದು ಮರು ಪ್ರಶ್ನಿಸಿತು.
ಈ ಬಗ್ಗೆ ಪ್ರತಿಕ್ರಿಯಿಸಿದ ಎಎಸ್‌ಜಿ ರಾಜು, ಇದೊಂದು ಜೀವಾವಧಿ ಶಿಕ್ಷೆ ವಿಧಿಸಬಹುದಾದ ಪ್ರಕರಣ ಎಂದರು. ಜುಲೈ 5 ರಂದು ಸುಪ್ರೀಂ ಕೋರ್ಟ್ ಸೆಟಲ್ವಾಡ್ ಅವರಿಗೆ ನೀಡಿದ್ದ ಮಧ್ಯಂತರ ಜಾಮೀನನ್ನು ಮುಂದುವರಿಸಿ, ಇವತ್ತಿಗೆ ವಿಚಾರಣೆ ಮುಂದೂಡಿತ್ತು. ಇದಕ್ಕೂ ಮೊದಲು ಜುಲೈ 1 ರಂದು ಸುಪ್ರೀಂ ಕೋರ್ಟ್ , ಗುಜರಾತ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ, ಸೆಟಲ್ವಾಡ್‌ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಇಂದು ಅವರಿಗೆ ಸಾಮಾನ್ಯ ಜಾಮೀನನ್ನು ಸಹ ಮಂಜೂರು ಮಾಡಿದೆ.
ಇದನ್ನು ಓದಿ: ಜುಲೈ 19ರವರೆಗೆ ತೀಸ್ತಾ ಸೆಟಲ್ವಾಡ್‌ಗೆ ಬಂಧನದಿಂದ ಮಧ್ಯಂತರ ರಕ್ಷಣೆ ವಿಸ್ತರಿಸಿದ ಸುಪ್ರೀಂಕೋರ್ಟ್