ಮಸ್ಸೂರಿ (ಉತ್ತರಾಖಂಡ): ಈ ರೀತಿ ಇಂಗ್ಲಿಷ್ನಲ್ಲಿ ಮಾತನಾಡುತ್ತಿರುವ ಈ ವ್ಯಕ್ತಿ ಹೆಸರು ಮೊಹಮ್ಮದ್ ಶೋಯೆಬ್ ಆಲಮ್, ಇವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಬಳಿಕ ಶೆಡ್ವೊಂದರಲ್ಲಿ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದರು. ಇವರ ಏಕಾಂಗಿ ಜೀವನಕ್ಕೆ ಜೊತೆಯಾಗಿದ್ದು ಬೀದಿ ನಾಯಿಗಳು. ಇದೀಗ ಈ ನಾಯಿಗಳೇ ಇವರ ಬೆಸ್ಟ್ ಫ್ರೆಂಡ್ಸ್...
ಮಸ್ಸೂರಿಯ ಹಾಥಿ ಪಾವೋನ್ ಪ್ರದೇಶದ ಮುಫಾಲಿಸಿಯಲ್ಲಿ ಶೋಯೆಬ್ ಸಂತಸದ ಜೀವನ ಸಾಗಿಸುತ್ತಿದ್ದಾರೆ. ಅವರು ಬರೀ ನಾಯಿಗಳಷ್ಟೇ ಅಲ್ಲ ಹಸುಗಳೊಂದಿಗೂ ಒಡನಾಟ ಹೊಂದಿದ್ದಾರೆ. ಈ ಪ್ರಾಣಿಗಳಿಗೆ ಜೊತೆ ಶೋಯೆಬ್ ನಿಷ್ಕಲ್ಮಶ ಪ್ರೀತಿ ತೋರಿಸುತ್ತಾರೆ.
1988ರಲ್ಲಿ ಮೊಹಮ್ಮದ್ ಶೋಯೆಬ್ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡರು. ಶೋಯೆಬ್ ಯುದ್ಧ ವಿಮಾನಗಳಾದ ಜಾಗ್ವಾರ್ ಮತ್ತು ಮೀರಾಜ್ ಅನ್ನು ನೋಡಿಕೊಳ್ಳುತ್ತಿದ್ದರು. ಹಲವು ವರ್ಷಗಳ ಕಾಲ ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ 1996ರಲ್ಲಿ ಶೋಯೆಬ್ ಸಿಯಾಚಿನ್ನಲ್ಲಿ ಸೇವೆಗೆ ನಿಯೋಜನೆಗೊಂಡಾಗ, ಇದ್ದಕ್ಕಿದ್ದಂತೆ ಅವರನ್ನು ಕುರುಡುತನ ಬಾಧಿಸತೊಡಗಿತು. ಇದಾದ ಬಳಿಕ ಅವರು ಸೇವೆಯಿಂದ ಹೊರಬರಬೇಕಾಯಿತು.
2015ರಲ್ಲಿ ಶೋಯೆಬ್ ಮಸ್ಸೂರಿಯ ಹಾಥಿ ಪಾವೊನ್ ಪ್ರದೇಶದ ಕ್ಯಾಂಪ್‌ಸೈಟ್‌ಗೆ ಸ್ಥಳಾಂತರಗೊಂಡರು. ಸ್ವಲ್ಪ ಸಮಯದವರೆಗೆ ಅವರು ಪ್ಯಾರಾಗ್ಲೈಡಿಂಗ್ ತರಬೇತುದಾರರಾಗಿಯೂ ಕೆಲಸ ಮಾಡಿದರು. ಆದರೆ ಕ್ರಮೇಣ ಅವರು ಏಕಾಂಗಿ ಜೀವನ ನಡೆಸಲು ಮುಂದಾದರು. ಅವರು ಈಗ 6 ನಾಯಿಗಳನ್ನು ಸಾಕಿದ್ದಾರೆ. ಬೀದಿಯಲ್ಲಿ ಪರದಾಡುವ ನಾಯಿಗಳಿಗೆ ಇವರೇ ಆಸರೆಯಾಗಿದ್ದಾರೆ. ಹಲವು ಬಾರಿ ಪ್ರವಾಸಿಗರು ಇವರ ಬಲಿಯಿರುವ ನಾಯಿಗಳನ್ನ ದತ್ತು ಪಡೆದ ಉದಾಹರಣೆಯೂ ಇದೆಯಂತೆ.
ಈ ಅನಾಥ ಪ್ರಾಣಿಗಳಿಗೆ ವಾತ್ಸಲ್ಯ ನೀಡುತ್ತಿರುವ ಮಾಜಿ ವಾಯುಪಡೆಯ ಅಧಿಕಾರಿ, ಈಗ ಅವುಗಳನ್ನು ತನ್ನ ಕುಟುಂಬದ ಒಂದು ಭಾಗವೆಂದು ಪರಿಗಣಿಸಿದ್ದಾರೆ. ಪ್ರತಿನಿತ್ಯ ತಾವು ಊಟ ಮಾಡುವ ಮೊದಲೇ ಈ ನಾಯಿಗಳಿಗೆ ಊಟದ ವ್ಯವಸ್ಥೆ ಮಾಡುತ್ತಾರೆ. ಅವುಗಳೂ ಶೋಯೆಬ್ ಜತೆ ಉತ್ತಮ ಬಾಂಧವ್ಯ ಹೊಂದಿವೆ. ಸ್ವಾರ್ಥ ತುಂಬಿದ ಈ ಜಗತ್ತಿನಲ್ಲಿ ಶೋಯೆಬ್ ಅವರ ಪ್ರಾಣಿಗಳ ಬಗೆಗಿನ ನಿಸ್ವಾರ್ಥ ಪ್ರೀತಿ ಸಮಾಜಕ್ಕೆ ಮಾದರಿಯಾಗಿದೆ.