ಕಛ್(ಗುಜರಾತ್): ಮುಸ್ಲಿಂ ಧರ್ಮಗುರು ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗಿಯಾಗಿ ಕೋವಿಡ್ ನಿಯಮ ಉಲ್ಲಂಘಿಸಿರುವ ಘಟನೆ ಗುಜರಾತ್ನ ಕಛ್ನಲ್ಲಿ ನಡೆದಿದೆ.
ಅಂತ್ಯಕ್ರಿಯೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಪಾಲ್ಗೊಳ್ಳಬಾರದು ಎಂದು ಮೃತನ ಕುಟುಂಬದ ಮನವಿ ಹೊರತಾಗಿಯೂ ಸಾವಿರಾರು ಜನರು ಇದರಲ್ಲಿ ಭಾಗಿಯಾಗಿದ್ದಾರೆ.
ಮುಸ್ಲಿಂ ಸಮುದಾಯದ ಹಜರತ್ ಹಾಜಿ ಅಹ್ಮದ್ ಶಾ ಬಾವಾ ಬುಖಾರಿ ಮುಫ್ತಿ ಇಂದು ನಿಧನರಾಗಿದ್ದು, ಈ ವೇಳೆ ಕೋವಿಡ್ ನಿಯಮ ಧಿಕ್ಕರಿಸಿ ಜನರು ಸೇರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಇವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕಛ್ ಮುಸ್ಲಿಂ ಸಮುದಾಯದ ಮುಖಂಡ ಹಾಗೂ ಮುಫ್ತಿ ಕುಟುಂಬದವರು ಮಾಹಿತಿ ನೀಡಿದ್ದರು. ಹೀಗಾಗಿ ಇದರಲ್ಲಿ ಭಾಗಿಯಾಗದಂತೆ ಅವರು ಮನವಿ ಸಹ ಮಾಡಿದ್ದರು.
ಇದನ್ನೂ ಓದಿ: ತೆಲಂಗಾಣದಲ್ಲೂ ಆಕ್ಸಿಜನ್ ಕೊರತೆ... ಮೂವರು ಕೋವಿಡ್ ರೋಗಿಗಳು ಸಾವು
ಆದರೆ ಅವರ ಸಾವಿನ ಸುದ್ದಿ ಹೊರಬರುತ್ತಿದ್ದಂತೆ ಸಾವಿರಾರು ಜನರು ಅಂತ್ಯಕ್ರಿಯೆ ನಡೆಸುವ ಸ್ಥಳಕ್ಕಾಗಮಿಸಿ, ಅದರಲ್ಲಿ ಭಾಗಿಯಾಗಿದ್ದಾರೆ.
ಮುಸ್ಲಿಂ ಸಮುದಾಯದ ಉನ್ನತಿಗಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದ ಹಜರತ್ ಹಾಜಿ ಅಹ್ಮದ್ ಶಾ ಬಾವಾ ಬುಖಾರಿ ಮುಫ್ತಿ ಕಚ್ನಲ್ಲಿ ನಿಧನರಾಗಿದ್ದರು. ಮುಸ್ಲಿಮರು ಮತ್ತು ಹಿಂದೂ ಸಮುದಾಯಗಳೆರಡರಲ್ಲೂ ಜನಪ್ರಿಯ ವ್ಯಕ್ತಿಯಾಗಿದ್ದ ಇವರು, ಕೋಮು ಸೌಹಾರ್ದತೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರು.
ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿದ್ದ ಮುಫ್ತಿ, ಭುಜ್ ಮತ್ತು ಮಾಂಡ್ವಿಯಲ್ಲಿ ಅನಾಥ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಜರತ್ ಹಾಜಿ ಅಹ್ಮದ್ ಶಾ ಬಾವಾ ಬುಖಾರಿ ಮುಫ್ತಿ ಅವರಿಗೆ ಕಚ್ ಸೇರಿದಂತೆ ದೇಶಾದ್ಯಂತ ಅಪಾರ ಅಭಿಮಾನಿ ಬಳಗವಿದೆ.