ಪಣಜಿ (ಗೋವಾ): ಸೋನಾಲಿ ಫೋಗಟ್ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ಕರ್ಲಿಸ್ ಕ್ಲಬ್ ಮಾಲೀಕ ಎಡ್ವಿನ್ ನೂನಿಸ್ ಮತ್ತು ಡ್ರಗ್ ಪೆಡ್ಲರ್ ದತ್ತಪ್ರಸಾದ್ ಗಾಂವ್ಕರ್ ಅವರನ್ನು ಬಂಧಿಸಿದ್ದಾರೆ. ತನಿಖೆ ಮುಗಿಯುವ ವರೆಗೆ ಕರ್ಲಿಸ್ ಬಾರ್ ಬೀಗ ಹಾಕಿದ್ದಾರೆ.
ಸೋನಾಲಿ ಫೋಗಟ್ ಸಾವಿಗೆ ಮಾದಕ ದ್ರವ್ಯ ಸೇವನೆಯೇ ಕಾರಣ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ. ಮೃತದೇಹದ ಮೇಲೆ ಅನೇಕ ಗಾಯದ ಗುರುತುಗಳಿರುವುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ನಿನ್ನೆ ಬಯಲಾಗಿತ್ತು. ಹೀಗಾಗಿ ಪೊಲೀಸರು ಇದೊಂದು ಕೊಲೆ ಎಂಬ ತೀರ್ಮಾನಕ್ಕೆ ಬಂದು ಗುರುವಾರ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿ ಸುಧೀರ್ ಸಾಂಗ್ವಾನ್ ಮತ್ತು ಅವರ ಸಹವರ್ತಿ ಸುಖ್ವಿಂದರ್ ಸಿಂಗ್ ಅವರು ಕ್ಲಬ್‌ನಲ್ಲಿ ಸೋನಾಲಿ ಫೋಗಟ್ ಜೊತೆ ಪಾರ್ಟಿ ಮಾಡುತ್ತಿರುವುದು ಕಂಡುಬಂದಿದೆ. ಅವರಲ್ಲಿ ಓರ್ವರು ಸೋನಾಲಿಗೆ ಬಲವಂತವಾಗಿ ಏನೋ ಸೇವಿಸಿರುವುದು ಗೊತ್ತಾಗಿದೆ ಎಂದು ಐಜಿಪಿ ಓಂವಿರ್ ಸಿಂಗ್ ಬಿಷ್ಣೋಯ್ ತಿಳಿಸಿದ್ದಾರೆ.
ಆರೋಪಿಗಳಾದ ಸುಖ್ವಿಂದರ್ ಮತ್ತು ಸುಧೀರ್ ಉದ್ದೇಶಪೂರ್ವಕವಾಗಿ ಪಾನೀಯದಲ್ಲಿ ಡ್ರಗ್ಸ್ ಬೆರೆಸಿ ಅದನ್ನು ಕುಡಿಯುವಂತೆ ಒತ್ತಾಯಿಸಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಐಜಿಪಿ ಮಾಹಿತಿ ನೀಡಿದರು.
ಇದನ್ನೂ ಓದಿ : ಸೋನಾಲಿ ಫೋಗಟ್ ದೇಹದಲ್ಲಿ ಗಾಯದ ಗುರುತು: ಮರಣೋತ್ತರ ಪರೀಕ್ಷಾ ವರದಿ ಬಹಿರಂಗ
ಹರಿಯಾಣದ ಹಿಸಾರ್‌ನ ಸೋನಾಲಿ ಫೋಗಟ್ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದರು. ಅವರ ಮೃಹದೇಹವನ್ನು ಸೇಂಟ್ ಆಂಥೋನಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆರಂಭದಲ್ಲಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮೃತದೇಹದ ಮೇಲೆ ಅನೇಕ ಗಾಯದ ಗುರುತುಗಳಿರುವುದು ತಿಳಿದು ಬಂದಿದೆ ಎಂದು ಮೊದಲು ಹೇಳಲಾಗಿತ್ತು.
ಹೀಗಾಗಿ ಗೋವಾ ಪೊಲೀಸರು ಸೋನಾಲಿ ಅವರ ಆಪ್ತ ಸಹಾಯಕ ಸುಧೀರ್ ಸಾಂಗ್ವಾನ್ ಮತ್ತು ಸುಖ್ವಿಂದರ್ ವಿರಯದ್ಧ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದರು. ಪಾರ್ಟಿ ವೇಳೆ ಬಲವಂತವಾಗಿ ಓವರ್ ಡೋಸ್ ಡ್ರಗ್ಸ್ ನೀಡಿದ್ದ ವಿಚಾರವನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇನ್ನೂ ಸಾವಿನ ಬಳಿಕ ಕುಟುಂಬಸ್ಥರು ಸೂಕ್ತ ತನಿಖೆಗೆ ಒತ್ತಾಯಿಸಿದ್ದರು. ಅಲ್ಲದೇ ಸೋನಾಲಿಯ ಆಪ್ತ ಸಹಾಯಕರು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದೇ ವೇಳೆ ಅವರ ಹುಟ್ಟೂರಲ್ಲಿ ಸೋನಾಲಿ ಅಂತ್ಯ ಕ್ರಿಯೆ ನೆರವೇರಿದೆ.
ಇದನ್ನೂ ಓದಿ : ಸೋನಾಲಿ ಫೋಗಟ್ ಸಾವಿಗೆ ಮಾದಕ ದ್ರವ್ಯ ಸೇವನೆ ಕಾರಣ: ಗೋವಾ ಐಜಿಪಿ