ಗುವಾಹಟಿ(ಅಸ್ಸೋಂ): ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಇನ್ನೂ ಜಟಿಲವಾಗಿದೆ. 35 ಜಿಲ್ಲೆಗಳ ಪೈಕಿ 32 ಜಿಲ್ಲೆಗಳು ಹಾನಿಗೊಳಗಾಗಿವೆ. 125 ಕಂದಾಯ ವೃತ್ತಗಳ ವ್ಯಾಪ್ತಿಯಲ್ಲಿ ಒಟ್ಟು 5,424 ಗ್ರಾಮಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿವೆ ಎಂದು ವರದಿಯಾಗಿದೆ.
ASDMA ಪ್ರಕಾರ, 47,72,140 ಜನರು ಪ್ರವಾಹದಲ್ಲಿ ಸಿಲುಕಿದ್ದು, ಈವರೆಗೆ 73 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸೋಮವಾರ 11 ಜನರು ಸಾವನಪ್ಪಿದ್ದಾರೆ. 33,84,326 ಪ್ರಾಣಿಗಳು ಪ್ರವಾಹಕ್ಕೆ ಸಿಲುಕಿದ್ದು, ಅದರಲ್ಲಿ 5,232 ಪ್ರಾಣಿಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ ಎನ್ನಲಾಗ್ತಿದೆ.
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಭಾರತೀಯ ಸೇನೆ, ಅಗ್ನಿಶಾಮಕ ದಳ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿವೆ. ರಾಜ್ಯಾದ್ಯಂತ ಒಟ್ಟು 23,1819 ಜನರು ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಒಟ್ಟು 1,425 ಶಿಬಿರಗಳನ್ನು ಸ್ಥಾಪಿಸಲಾಗಿದೆ. ಒಟ್ಟು 1,13,485.37 ಹೆಕ್ಟೇರ್ ಕೃಷಿ ಭೂಮಿ ಪ್ರವಾಹಕ್ಕೆ ತುತ್ತಾಗಿದೆ. ಬೇಕಿ, ಪಗ್ಲಾಡಿಯಾ, ಪುತಿಮರಿ, ಕಪಿಲಿ, ಬ್ರಹ್ಮಪುತ್ರ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕಪಿಲಿ ನದಿ ಗರಿಷ್ಠ ಮಟ್ಟ ದಾಟಿದೆ.
ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಸೋಮವಾರ ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಪ್ರವಾಹ ಪೀಡಿತ ಜನರಿಗೆ ಸೂಕ್ತ ನೆರವು ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ರಕ್ಷಣಾ ಪಡೆಗಳು ಅಥವಾ ಪರಿಹಾರ ದೋಣಿಗಳು ತಲುಪಲು ಸಾಧ್ಯವಾಗದ ಸ್ಥಳಗಳಲ್ಲಿ ಹೆಲಿಕಾಪ್ಟರ್ ಮೂಲಕ ಪರಿಹಾರ ವಿತರಿಸಲು ಮುಖ್ಯಮಂತ್ರಿ ಶರ್ಮಾ ಆದೇಶಿಸಿದ್ದಾರೆ.
ಇದನ್ನೂ ಓದಿ: ಅಸ್ಸೋಂನಲ್ಲಿ ವರುಣಾರ್ಭಟ: 31 ಲಕ್ಷ ಮಂದಿ ನಿರಾಶ್ರಿತರು, 62 ಜನ ಸಾವು