ಬೆಂಗಳೂರು : ಭಾರತದಲ್ಲಿ ಪ್ರತಿದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ತೀವ್ರ ಏರಿಕೆ ಕಾಣುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಕುಸಿತ ಕಂಡು ಬಂದರೂ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿಯಮಿತವಾಗಿ ಹೆಚ್ಚಿಸಲಾಗುತ್ತಿದೆ. ಇದರಿಂದ ಸಾಮಾನ್ಯ ಜನರಿಗೆ ನೋವಾಗಿದೆ. ಕೃಷಿ ಸೇರಿದಂತೆ ಎಲ್ಲಾ ಆರ್ಥಿಕ ಚಟುವಟಿಕೆಗಳಿಗೆ ಹೊಡೆತ ಬಿದ್ದಿದೆ ಎಂದು ಇಂದು ಇ-ಮೇಲ್ ಮೂಲಕ ಕಳಿಸಿದ ಪತ್ರದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಪೆರಿಕಾಲ್ ಸುಂದರ್ ಹೇಳಿದ್ದಾರೆ.
ಕೈಗಾರಿಕಾ, ಸೇವೆ ಮತ್ತು ಕೃಷಿ ಸೇರಿದಂತೆ ಎಲ್ಲಾ ಆರ್ಥಿಕ ಚಟುವಟಿಕೆಗಳು ಸತತವಾಗಿ ಎರಡು ತಿಂಗಳಿಂದ ಕೋವಿಡ್-19 ಸಾಂಕ್ರಾಮಿಕ ಅಲೆಗಳಿಂದಾಗಿ ನಿಂತಿವೆ. ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ವ್ಯಾಪಾರ ಸಂಸ್ಥೆಗಳು ಭಾರೀ ನಷ್ಟ ಅನುಭವಿಸುತ್ತಿವೆ ಮತ್ತು ಶಾಸನಬದ್ಧ ತೆರಿಗೆಗಳು, ವಿದ್ಯುತ್ ಬಿಲ್‌ಗಳು, ವೇತನಗಳು, ಬ್ಯಾಂಕ್ ಮರುಪಾವತಿಗಳು ಮತ್ತು ಇತರ ನಿರ್ವಹಣಾ ಶುಲ್ಕಗಳಂತಹ ಅಗತ್ಯ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಉಲ್ಲೇಖಿಸಿದ್ದಾರೆ.
ಈ ಕಷ್ಟದ ಸಮಯದಲ್ಲಿ, ಪೆಟ್ರೋಲ್ ಮತ್ತು ಡೀಸೆಲ್‌ನ ಬೆಲೆ ಏರಿಕೆಯು ರಾಷ್ಟ್ರವನ್ನು ತೀವ್ರವಾಗಿ ಬಾಧಿಸಿದೆ. ಅದರಲ್ಲೂ ವಿಶೇಷವಾಗಿ ಮಧ್ಯಮ ವರ್ಗದವರನ್ನು. ಯಾಕೆಂದರೆ, ಇವರು ದ್ವಿಚಕ್ರ ವಾಹನಗಳು, ಆಟೋಗಳು, ಟ್ಯಾಕ್ಸಿಗಳು ಇತ್ಯಾದಿಗಳನ್ನು ದಿನನಿತ್ಯ ಬಳಸುತ್ತಾರೆ. ಆಶ್ಚರ್ಯಕರ ಸಂಗತಿಯೆಂದರೆ, ಇಂಧನದ ಮೂಲ ವೆಚ್ಚ ಸರಾಸರಿ ಲೀಟರ್ ರೂ. 32 ಮಾತ್ರವಾಗಿದ್ದರೂ, ಭಾರತ ಸರ್ಕಾರವು ವಿಧಿಸುವ ಶೇ.35ರಷ್ಟು ಸುಂಕ ಮತ್ತು ರಾಜ್ಯ ಸರ್ಕಾರವು ವಿಧಿಸುವ ಶೇ.32ರಷ್ಟು ಸುಂಕವು ರೂ. 100 ಕ್ಕಿಂತ ಹೆಚ್ಚು ದರ ಲೀಟರ್ ಪೆಟ್ರೋಲ್ ತಲುಪುತ್ತದೆ ಮತ್ತು ಡೀಸೆಲ್ ಕೂಡ ರೂ. 92 ಮುಟ್ಟಿದೆ ಎಂದಿದ್ದಾರೆ. ಪೆಟ್ರೋಲ್ ಡೀಸೆಲ್ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರಗಳೊಂದಿಗೆ ಸಂವಹನ ನಡೆಸಬೇಕು ಎಂದು ಕೋರಿದ್ದಾರೆ.
ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ & ಇಂಡಸ್ಟ್ರಿ (ಎಫ್‌ಕೆಸಿಸಿಐ) ರಾಜ್ಯ ಮಟ್ಟದ ಅಪೆಕ್ಸ್ ಸಂಸ್ಥೆಯಾಗಿದ್ದು, ಕರ್ನಾಟಕ ರಾಜ್ಯದ ಕೈಗಾರಿಕೆ, ಸೇವೆ ಮತ್ತು ವ್ಯಾಪಾರ ಸಂಸ್ಥೆಗಳು ಸೇರಿ ಸುಮಾರು 400 ಸಂಘಗಳು ಮತ್ತು 30 ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ವಲಯಗಳಲ್ಲಿ 4,000ಕ್ಕೂ ಹೆಚ್ಚು ಸದಸ್ಯರನ್ನು ಪ್ರತಿನಿಧಿಸುತ್ತದೆ. ಉತ್ಪಾದನೆ ಮತ್ತು ವ್ಯಾಪಾರ ವಲಯದಲ್ಲಿ ಆಮದುದಾರರು ಮತ್ತು ರಫ್ತುದಾರರು ಕೂಡ ನಮ್ಮ ಸಂಸ್ಥೆಯ ಪ್ರತಿನಿಧಿಗಳಾಗಿದ್ದಾರೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ಗೆ ಹೇಳಿದ್ದಾರೆ.
ಆದ್ದರಿಂದ ಎಲ್ಲಾ ಸದಸ್ಯರ ಪ್ರತಿನಿಧಿಯಾಗಿ ಕೆಲ ವಿಷಯಗಳನ್ನು ತಿಳಿಸುತ್ತಿದ್ದೇನೆ ಮತ್ತು ಪ್ರಶ್ನಿಸುತ್ತಿದ್ದೇನೆ. ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎರಡರ ಬೆಲೆಗಳು ಗಗನಕ್ಕೇರುತ್ತಿವೆ ಎಂಬ ಅಂಶವನ್ನು ನೀವು ತಿಳಿದಿದ್ದೀರಿ. ಸಾಮಾನ್ಯ ಮನುಷ್ಯನ ಕೃಷಿ, ವ್ಯವಹಾರ ಚಟುವಟಿಕೆಗಳು, ವ್ಯಾಪಾರ, ಕೈಗಾರಿಕೆ, ಸೇವೆ ಮತ್ತು ಇತರ ಎಲ್ಲ ದಿನನಿತ್ಯದ ಆರ್ಥಿಕ ಚಟುವಟಿಕೆಗಳಿಗೆ ಇಂಧನವು ಒಂದು ಪ್ರಮುಖ ಮತ್ತು ಅವಶ್ಯಕ ಅವಶ್ಯಕತೆಯಾಗಿದೆ.
ಇಂಧನದ ದೈನಂದಿನ ಬೆಲೆ ಏರಿಕೆಯು ಸಾಮಾನ್ಯ ಮನುಷ್ಯನ ದಿನನಿತ್ಯದ ಜೀವನ ಮತ್ತು ಇತರ ಎಲ್ಲ ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ. ಇಂಧನ ಬೆಲೆಯಲ್ಲಿನ ಹೆಚ್ಚಳವು ಸಾರಿಗೆ ವೆಚ್ಚದಲ್ಲಿ ಕೂಡ ಹೆಚ್ಚಳಕ್ಕೆ ಕಾರಣವಾಗುತ್ತದೆ, ಈ ಎಲ್ಲಾ ಚಟುವಟಿಕೆಗಳ ಉತ್ಪಾದನೆ ಮತ್ತು ನಿರ್ವಹಣಾ ವೆಚ್ಚವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದಿದ್ದಾರೆ. ಮೂಲ ಇಂಧನ ಬೆಲೆ ಲೀಟರ್‌ಗೆ ಸುಮಾರು 32 ರೂ.ಗಳಾಗಿದ್ದರೂ, ಕೇಂದ್ರ ಸರ್ಕಾರವು ಸುಮಾರು ಶೇ. 35ರಷ್ಟು ಸುಂಕವನ್ನು ವಿಧಿಸುತ್ತದೆ ಮತ್ತು ರಾಜ್ಯ ಸರ್ಕಾರವು ಇಂಧನದ ಮೇಲೆ ಶೇ. 32ರಷ್ಟು ಸುಂಕವನ್ನು ವಿಧಿಸುತ್ತದೆ ಈ ಕಾರಣದಿಂದ ಬೆಲೆಯನ್ನು ಶೇ. 300ರಷ್ಟು ಹೆಚ್ಚಿಸುತ್ತದೆ. ಈ ಬಗ್ಗೆ ಸಚಿವರು ಗಮನ ಹರಿಸಬೇಕು ಎಂದು ಕೈಗಾರಿಕಾ ಸಂಸ್ಥೆಯ ಪೆರಿಕಾಲ್ ಎಂ ಸುಂದರ್ ವಿನಂತಿಸಿದ್ದಾರೆ.