ಜೈಪುರ (ರಾಜಸ್ಥಾನ): ರಾಜಧಾನಿಯ ಪ್ರತಾಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 5 ವರ್ಷದ ಅಮಾಯಕ ಬಾಲಕಿ ಮೇಲೆ ಕ್ರೌರ್ಯ ನಡೆದ ಘಟನೆ ಬೆಳಕಿಗೆ ಬಂದಿದೆ. ನೆರೆಹೊರೆಯಲ್ಲಿ ವಾಸಿಸುತ್ತಿದ್ದ 15 ವರ್ಷದ ಬಾಲಕ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಾಲಕಿ ರಕ್ತಸಿಕ್ತ ಸ್ಥಿತಿಯಲ್ಲಿ ಕಂಡುಬಂದಿದ್ದಾಳೆ.
ಬಾಲಕಿ ತೀವ್ರ ನೋವಿನಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಪ್ರಕರಣದ ತನಿಖೆಯನ್ನು ಆರ್‌ಪಿಎಸ್ ಅಧಿಕಾರಿಗೆ ವಹಿಸಲಾಗಿದ್ದು, ಅಣ್ಣ ಎಂದು ಕರೆಸಿಕೊಳ್ಳುತ್ತಿದ್ದ ಕಿರಾತಕನ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ತಿಂಡಿಯ ಆಮಿಷವೊಡ್ಡಿ ಅತ್ಯಾಚಾರ: ಪ್ರತಾಪ್ ನಗರ ಪೊಲೀಸ್ ಠಾಣೆಯ ಪೊಲೀಸರ ಪ್ರಕಾರ, ಭಾನುವಾರ ಮಧ್ಯಾಹ್ನ ಬಾಲಕಿ ತನ್ನ ಮನೆಯ ಬಳಿ ಆಟವಾಡುತ್ತಿದ್ದಳು. ನೆರೆಹೊರೆಯಲ್ಲಿ ವಾಸಿಸುತ್ತಿದ್ದ 15 ವರ್ಷದ ಬಾಲಕ ತಿಂಡಿ ನೀಡುವುದಾಗಿ ಆಮಿಷ ಒಡ್ಡಿ ಬಾಲಕಿಯನ್ನು ತನ್ನೊಂದಿಗೆ ಕೊಠಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಕಿರುಚಾಡಿದಾಗ ಆರೋಪಿ ಆಕೆಯ ಬಾಯಿ ಮುಚ್ಚಿಕೊಂಡು ಅತ್ಯಾಚಾರ ನಡೆಸಿ ನಂತರ ಪರಾರಿಯಾಗಿದ್ದಾನೆ.
ರಕ್ತದ ಮಡುವಿನಲ್ಲಿ ಅಳುತ್ತಿದ್ದ ಬಾಲಕಿ: ರಕ್ತದ ಮಡುವಿನಲ್ಲಿ ಅಳುತ್ತಿದ್ದ ಬಾಲಕಿ ತನ್ನ ತಾಯಿಯ ಬಳಿ ಬಂದಿದ್ದಾಳೆ. ಮುಗ್ಧ ಮಗಳ ಸ್ಥಿತಿ ಕಂಡು ತಾಯಿ ಸಹ ಕಣ್ಣೀರಾಗಿದ್ದಾಳೆ. ಅಣ್ಣ ಎಂದು ಕರೆಸಿಕೊಳ್ಳುತ್ತಿದ್ದ ಕಿರಾತಕ ಮಾಡಿದ ಕ್ರೂರತನವನ್ನು ಬಾಲಕಿ ತನ್ನ ತಾಯಿಗೆ ತಿಳಿಸಿದ್ದಾಳೆ. ತಕ್ಷಣ ಬಾಲಕಿ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಾಲಕಿಯ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಭಾನುವಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಅಂತೆಯೇ ಆರೋಪಿ ಬಾಲಕನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಸಂಕ ನನ್ನನ್ನು ನೇರವಾಗಿ ಭೇಟಿಯಾಗಿಲ್ಲ: ಲಕ್ಷ್ಮಣ್ ಸವದಿ