ಪುಣೆ(ಮಹಾರಾಷ್ಟ್ರ): ರಸ್ತೆ ಸಂಚಾರಕ್ಕೆ ಅನುಕೂಲವಾಗಿದ್ದರೂ ನಾಸಿಕ್ ಹೆದ್ದಾರಿಯಲ್ಲಿ ಅಪಘಾತ ಪ್ರಕರಣಗಳು ಮಾತ್ರ ನಿಂತಿಲ್ಲ. ಪುಣೆಯಿಂದ ಬರುತ್ತಿದ್ದ ವಾಹನ ಮಹಿಳೆಯರ ಗುಂಪಿನ ಮೇಲೆ ಹರಿದಿದ್ದು, ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡ ಭೀಕರ ಘಟನೆ ಸೋಮವಾರ ರಾತ್ರಿ ನಡೆದಿದೆ.
ಖೇಡ್ ತಾಲೂಕಿನ ಶಿರೋಲಿ ಗ್ರಾಮದ ಬಳಿ ಈ ದುರಂತ ಸಂಭವಿಸಿದೆ. ಸೋಮವಾರ ರಾತ್ರಿ ವೇಳೆ 17 ಮಹಿಳೆಯರು ಇದೇ ಮಾರ್ಗವಾಗಿ ಹೋಗುತ್ತಿದ್ದರು. ಈ ವೇಳೆ ಪುಣೆಯಿಂದ ಬರುತ್ತಿದ್ದ ವಾಹನ ಮಹಿಳೆಯರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಘಟನೆಯಲ್ಲಿ ಐವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಬ್ಬರ ರುಂಡ ಮತ್ತು ಮುಂಡ ಬೇರ್ಪಟ್ಟಿದೆ. ಭೀಕರ ಘಟನೆಯ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ.
ಗಾಯಗೊಂಡ 13 ಮಂದಿಯನ್ನು ಪೊಲೀಸರು ತಮ್ಮ ಜೀಪಿನಲ್ಲಿ ಸಾಗಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರ ತಕ್ಷಣದ ನೆರವಿನಿಂದಾಗಿ ಮಹಿಳೆಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಚಂಡೋಳಿ ಗ್ರಾಮಾಂತರ ಆಸ್ಪತ್ರೆ ಹಾಗೂ ರಾಜಗುರು ನಗರದ ನಾಲ್ಕೈದು ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
17 ಮಹಿಳೆಯರು ಪುಣೆ ನಾಸಿಕ್ ರಸ್ತೆಯಲ್ಲಿರುವ ಖಾರ್ಪುಡಿ ಗಲ್ಲಿಯಲ್ಲಿ ಹಮ್ಮಿಕೊಂಡಿದ್ದ ಮದುವೆ ಸಮಾರಂಭಕ್ಕೆ ಅಡುಗೆ ಮಾಡಲು ಹೊರಟಿದ್ದರು. ಪುಣೆಯ ವಿವಿಧ ಭಾಗಗಳಿಂದ ಅವರು ಬಂದಿದ್ದರು. ರಸ್ತೆ ದಾಟುತ್ತಿದ್ದ ವೇಳೆ, ಪುಣೆ ಕಡೆಯಿಂದ ಬರುತ್ತಿದ್ದ ವಾಹನವು ಬಲವಾಗಿ ಡಿಕ್ಕಿ ಹೊಡೆದಿದೆ.
ಉತ್ತರಪ್ರದೇಶಲ್ಲಿ ಮೂವರ ಸಾವು: ಉತ್ತರಪ್ರದೇಶದ ಸೀತಾಪುರ ಜಿಲ್ಲೆಯ ಸಿಧೌಲಿ ಕೊತ್ವಾಲಿ ಪ್ರದೇಶದಲ್ಲಿ ಮದುವೆ ಸಮಾರಂಭ ಮುಗಿಸಿ ಹಿಂತಿರುಗುತ್ತಿದ್ದ ಬೈಕ್ಗೆ ವಾಹನವೊಂದು ಡಿಕ್ಕಿ ಹೊಡೆದು ಬೈಕನಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ. ಅಪಘಾತವೆಸಗಿದ ವಾಹನವನ್ನು ಪೊಲೀಸರು ಶೋಧಿಸುತ್ತಿದ್ದಾರೆ.
ಆನಂದ್ ಗುಪ್ತಾ ಅವರ ಮಗ ಅಜಯ್ ಕುಮಾರ್ ಗುಪ್ತಾ ಮತ್ತು ರಾಂಪುರ ಕಾಲಾ ನಿವಾಸಿ ಹನುಮಾನ್ ಪ್ರಸಾದ್ ಅವರ ಮಗ ದಯಾಳ್ ಮತ್ತು ಬಖ್ತಾವರಪುರ ನಿವಾಸಿ ಜಿತೇಂದ್ರ ಪಾಲ್ ಅವರ ಮಗ ಮಹೇಶ್ವರ್ ದಯಾಳ್ ಸೇರಿ ಸಿಧೌಲಿಯಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಹಾಜರಾಗಿದ್ದರು. ಮದುವೆ ಮುಗಿಸಿ ಮನೆಗೆ ಮರಳುತ್ತಿದ್ದಾಗ ವೇಗವಾಗಿ ಬಂದ ವಾಹನವೊಂದು ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಇನ್ನೊಂದೆಡೆ ಉತ್ತರಾಖಂಡದದ ಹರಿದ್ವಾರದಲ್ಲಿ ಮದುವೆ ಮೆರವಣಿಗೆಯ ಮೇಲೆ ಕಾರೊಂದು ಹರಿದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿತ್ತು. ರಸ್ತೆಯಲ್ಲಿ ಡಿಜೆ ಸದ್ದಿಗೆ ನೃತ್ಯ ಮಾಡುತ್ತಾ ಹೋಗುತ್ತಿದ್ದವರಿಗೆ ವೇಗವಾಗಿ ಬಂದ ಸ್ಕಾರ್ಪಿಯೋ ಕಾರು ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದರೆ, 31 ಮಂದಿ ಗಾಯಗೊಂಡಿದ್ದರು.
ಓದಿ: ಮದುವೆ ಮುಗಿಸಿ ಹಿಂತಿರುಗುತ್ತಿದ್ದ ಬುಲೆಟ್ಗೆ ಅಪರಿಚಿತ ವಾಹನ ಡಿಕ್ಕಿ; 3 ಜನ ಬೈಕ್ ಸವಾರರು ಸಾವು