ಅಮರಾವತಿ (ಆಂಧ್ರ ಪ್ರದೇಶ): ಆಂಧ್ರ ಪ್ರದೇಶ ವಿಧಾನಸಭೆಯಿಂದ 5 ತೆಲುಗು ದೇಶಂ ಪಕ್ಷದ (ಟಿಡಿಪಿ) ಶಾಸಕರು ಅಮಾನತುಗೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಅಕ್ರಮ ಮದ್ಯ ಸೇವಿಸಿ ಸುಮಾರು 18 ಜನರು ಸಾವನ್ನಪ್ಪಿದ ದುರಂತದ ಬಗ್ಗೆ ತಕ್ಷಣದ ಚರ್ಚೆಗೆ ಪ್ರಮುಖ ಪ್ರತಿಪಕ್ಷಗಳು ಒತ್ತಾಯಿಸಿದ್ದು, ಸೋಮವಾರ ಬೆಳಗ್ಗೆ ಆರಂಭದಿಂದಲೂ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ 5 ಟಿಡಿಪಿ ಶಾಸಕರನ್ನು ಅಮಾನತುಗೊಳಿಸಲಾಯಿತು.
ಅಕ್ರಮ ಮದ್ಯ ದುರಂತ ಸಂಬಂಧ ಚರ್ಚಿಸಲು ಟಿಡಿಪಿ ಮಂಡಿಸಿದ ನಿಲುವಳಿ ಸೂಚನೆಯನ್ನು ಸ್ಪೀಕರ್ ತಿರಸ್ಕರಿಸಿದರು. ಸಾಮಾನ್ಯ ವಿಚಾರಗಳನ್ನು ಕೈಗೆತ್ತಿಕೊಳ್ಳಲು ಪ್ರಯತ್ನಿಸಿದರು. ಆದ್ರೆ ಇದಕ್ಕೆ ಪ್ರತಿಪಕ್ಷಗಳು ಅವಕಾಶ ನೀಡಲಿಲ್ಲ. ಇದು ಗದ್ದಲಕ್ಕೆ ಕಾರಣವಾಗಿ ಸದನವನ್ನು ಎರಡು ಬಾರಿ ಮುಂದೂಡಲಾಯಿತು.
ಎರಡನೇ ಬಾರಿ ಸದನವನ್ನು ಮುಂದೂಡಿಕೆ ಮಾಡಿ, ಮತ್ತೆ ಸದನ ಆರಂಭವಾದಾಗಲು ಗದ್ದಲ್ಲ ಮುಂದುವರೆದಿದ್ದರಿಂದ ಟಿಡಿಪಿ ಶಾಸಕರನ್ನು ಸ್ವೀಕರ್ ಅಮಾನತುಗೊಳಿಸಿದರು. ತೆಲುಗು ದೇಶಂ ಪಕ್ಷದ ಉಪನಾಯಕರಾದ ಕೆ.ಅಚ್ಚನ್ನಾಯ್ಡು, ನಿಮ್ಮಲಾ ರಾಮನಾಯ್ಡು, ಹಿರಿಯ ಸದಸ್ಯರಾದ ಗೋರಂಟ್ಲ ಬುಚ್ಚಯ್ಯ ಚೌಧರಿ, ಪಯ್ಯಾವುಲ ಕೇಶವ್ ಮತ್ತು ಡಿಬಿವಿ ಸ್ವಾಮಿ ಅಮಾನತುಗೊಂಡ ಶಾಸಕರಾಗಿದ್ದಾರೆ.
ಸದನದಲ್ಲಿ ಮಾರ್ಷಾಲ್ಗಳ ಅಬ್ಬರ: ಟಿಡಿಪಿ ಶಾಸಕರು ಅಮಾನತುಗೊಳ್ಳುತ್ತಿದ್ದಂತೆ ಸ್ಪೀಕರ್ ಟಿ ಸೀತಾರಾಮ್ ಸೂಚನೆಗೂ ಮೊದಲೇ ಮಾರ್ಷಲ್‌ಗಳು ಸದನಕ್ಕೆ ಎಂಟ್ರಿ ಆದರು. ನಂತರ ಸ್ಪೀಕರ್ ಟಿ ಸೀತಾರಾಮ್ ಅವರ ನಿರ್ದೇಶನದ ಮೇರೆಗೆ, ಅಮಾನತುಗೊಂಡ ಟಿಡಿಪಿ ಸದಸ್ಯರನ್ನು ಹೊರಹಾಕಲು ಮಾರ್ಷಲ್‌ಗಳು ಪ್ರಯತ್ನಿಸಿದರು. ಹಿರಿಯ ಶಾಸಕ ಪಯ್ಯಾವುಲ ಕೇಶವ್ ಅವರನ್ನು ಹೊರಕ್ಕೆ ಕರೆದೊಯ್ದರು. ಮತ್ತೊಬ್ಬ ಹಿರಿಯ ಸದಸ್ಯ ಗೋರಂಟ್ಲಾ ಬುಚ್ಚಯ್ಯ ಚೌಧರಿ ಅವರನ್ನು ಎತ್ತಿ ಸಾಗಿಸಲು ಮಾರ್ಷಲ್‌ಗಳು ಪ್ರಯತ್ನಿಸಿದರು. ಇದನ್ನು ಗಮನಿಸಿದ ಇನ್ನುಳಿದ ಶಾಸಕರು ಮಾರ್ಷಲ್ಗಳ ಈ ಕ್ರಮವನ್ನು ವಿರೋಧಿಸಿ ಸ್ವತಃ ಹೊರನಡೆದರು.
ಇದನ್ನೂ ಓದಿ: ನಿಗೂಢ ಸಾವು ಪ್ರಕರಣ: ಅಧಿವೇಶನದಲ್ಲಿ ವೈಎಸ್‌ಆರ್‌ಸಿಪಿ - ಟಿಡಿಪಿ ಮಧ್ಯೆ ಭಾರಿ ಗಲಾಟೆ- ಐವರ ಅಮಾನತು!