ರಾಜನಂದಗಾಂವ್ (ಛತ್ತೀಸ್ಗಢ್): ಜಿಲ್ಲೆಯಲ್ಲಿ ದುರಂತವೊಂದು ಸಂಭವಿಸಿದೆ. ಸಂಭವಿಸಿದ್ದ ಕಾರು ಅಪಘಾತದಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸಜೀವ ದಹನವಾಗಿರುವ ಘಟನೆ ಖೈರಾಘರ್ ರಸ್ತೆಯ ಸಿಂಗರ್ಪುರ ಬಳಿ ನಡೆದಿದೆ.
ಖೈರಾಘಢ ರಸ್ತೆಯ ಸಿಂಗರಪುರ ಬಳಿ ರಾತ್ರಿ 2 ಗಂಟೆ ಸುಮಾರಿಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಮೃತ ಕುಟುಂಬದ ಸದಸ್ಯರು ಖೈರಾಘರ್ ನಿವಾಸಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಮೃತರನ್ನು ಸುಭಾಷ್ ಕೊಚ್ಚರ್, ಕಾಂತಿ ದೇವಿ ಕೊಚ್ಚರ್, ಭಾವನಾ ಕೊಚ್ಚರ್, ವೃದ್ಧಿ ಕೊಚ್ಚರ್ ಮತ್ತು ಪೂಜಾ ಕೊಚ್ಚರ್ ಎಂದು ಗುರುತಿಸಲಾಗಿದೆ. ಸುಭಾಷ್ ಕೊಚ್ಚರ್ ಖೈರಾಘರ್‌ನಲ್ಲಿ ಸೈಕಲ್ ಉದ್ಯಮಿಯಾಗಿದ್ದಾರೆ. ಮೂವರು ಪುತ್ರಿಯರ ವಯಸ್ಸು ಸುಮಾರು 20 ರಿಂದ 25 ವರ್ಷದೊಳಗಿದೆ.
ಓದಿ: ಭಾರಿ ಅಗ್ನಿ ಅವಘಡ.. ಕೊಳಗೇರಿಯಲ್ಲಿದ್ದ ಒಂದೇ ಕುಟುಂಬದ ಏಳು ಮಂದಿ ಸಜೀವದಹನ!
ರಾತ್ರಿ 12 ಗಂಟೆ ಸುಮಾರಿಗೆ ಖೈರಾಘರ್ ನಿವಾಸಿ ಸುಭಾಷ್ ಕೊಚ್ಚರ್ ಅವರು ಪತ್ನಿ, ಮಕ್ಕಳೊಂದಿಗೆ ಕಾರಿನಲ್ಲಿ ಬಲೋದ್ನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಹಾಜರಾಗಿ ಖೈರಾಘರ್‌ಗೆ ಹಿಂತಿರುಗುತ್ತಿದ್ದರು ಎಂದು ತಿಳಿದು ಬಂದಿದೆ. ರಾತ್ರಿ ಎರಡು ಗಂಟೆ ಸುಮಾರಿಗೆ ಸಿಂಗರಪುರದ ಗಣೇಶ ದೇವಸ್ಥಾನದ ಬಳಿಯ ತಡೆಗೋಡೆಗೆ ಕಾರು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ಕಾರು ಉರುಳಿ ಬಿದ್ದಿದೆ. ನಂತರ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಕಾರು ಡೋರ್ ಲಾಕ್ ಆಗಿದ್ದು ಮತ್ತು ಅಪಘಾತದಿಂದಾಗಿ ಗಾಯಗೊಂಡಿದ್ದರಿಂದ ಅವರೆಲ್ಲರೂ ಕಾರಿನಿಂದ ಹೊರ ಬರದೇ ಸಿಲುಕಿಕೊಂಡಿದ್ದರು. ಅವರು ಹೊರಗೆ ಬರುವಷ್ಟರಲ್ಲಿ ಕಾರಿಗೆ ಬೆಂಕಿ ತಗುಲಿ ಹೊತ್ತಿ ಉರಿಯಲಾರಂಭಿಸಿದ್ದು, ಬೆಂಕಿಯ ಜ್ವಾಲೆಗೆ ಕಾರಿನಲ್ಲಿದ್ದವರೆಲ್ಲರೂ ಸಜೀವ ದಹನವಾದರು.
ಸುದ್ದಿ ತಿಳಿಯುತ್ತಿದ್ದಂತೆ ಠೆಲ್ಕಡಿಹ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಕೈಗೊಂಡರು. ಬಳಿಕ ಮೃತದೇಹಗಳನ್ನು ಕಾರಿನಿಂದ ಹೊರ ತೆಗೆದು ಜಿಲ್ಲಾಸ್ಪತ್ರೆಗೆ ರವಾನಿಸಿದರು. ಈ ಘಟನೆ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ತನಿಖೆಯಲ್ಲಿ ಪೊಲೀಸರು ಮತ್ತು ವಿಧಿವಿಜ್ಞಾನ ತಂಡ ತೊಡಗಿಸಿಕೊಂಡಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಮಹಾದೇವ ತಿಳಿಸಿದ್ದಾರೆ.