ನವದೆಹಲಿ : ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವರಾದ ಅಜಯ್ ಕುಮಾರ್ ಮಿಶ್ರಾ ಅವರನ್ನು ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ ಆರೋಪದ ಮೇಲೆ ಐವರು ಯುವಕರನ್ನು ಪೊಲೀಸರು ಬಂಧಿಸಲಾಗಿದೆ. ಆರೋಪಿಗಳು ಇಂಟರ್ನೆಟ್ ಕರೆಗಳ ಮೂಲಕ ಬ್ಲ್ಯಾಕ್‌ಮೇಲ್ ಮಾಡಲು ಅಮೆರಿಕ ಮತ್ತು ರಷ್ಯಾದ ಗೇಟ್ಪಾಸ್ಗಳನ್ನು ಬಳಸುತ್ತಿದ್ದರು ಎಂದು ತಿಳಿದು ಬಂದಿದೆ.
ದೆಹಲಿಯ ನಾರ್ಥ್ ಅವೆನ್ಯೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಇದಕ್ಕಾಗಿ ಅವರು ದೆಹಲಿಯಲ್ಲಿರುವ ಅಮೆರಿಕ ಮತ್ತು ರೊಮೇನಿಯಾ ರಾಯಭಾರ ಕಚೇರಿಗಳ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಆ ಅಧಿಕಾರಿಗಳ ಸಹಾಯದೊಂದಿಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅಪರಾಧಿ ಎಂಬುದಕ್ಕೆ ನಮ್ಮ ಬಳಿ ಪೂರ್ತಿ ಸಾಕ್ಷಿಯ ವಿಡಿಯೋ ಇದೆ. 2 ಕೋಟಿ ರೂಪಾಯಿ ಹಣ ಕೊಡದಿದ್ದರೆ ವಿಡಿಯೋ ಬಿಡುಗಡೆ ಮಾಡುತ್ತೇವೆ ಎಂದು ಇಂಟರ್ನೆಟ್ ಕರೆಯ ಮೂಲಕ ಅಜಯ್ ಮಿಶ್ರಾ ಬಳಿ ಹಣಕ್ಕೆ ಬೇಡಿಕೆ ಇಡಲಾಗಿತ್ತು.
ಈ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು, ಅಮಿತ್ ಕುಮಾರ್ ಎಂಬಾತನನ್ನ ನೋಯ್ಡಾದಲ್ಲಿ ನಡೆಸುತ್ತಿದ್ದ ಕಾಲ್ ಸೆಂಟರ್ ಮೇಲೆ ದಾಳಿ ಮಾಡಿದ್ದಾರೆ. ಇದೇ ಕಾಲ್ ಸೆಂಟರ್ ಮೂಲಕ ಆರೋಪಿಗಳು ಇಂಟರ್ನೆಟ್ ಕಾಲ್ ಮಾಡಲು ಅವಶ್ಯಕವಾಗಿರುವ ಗೇಟ್ ಪಾಸ್ ಬಳಸಿ, ಅಜಯ್ ಮಿಶ್ರಾ ಅವರಿಗೆ ಕರೆ ಮಾಡುತ್ತಿದ್ದರೆಂದು ತಿಳಿದು ಬಂದಿದೆ.
ಕಾಲ್ಸೆಂಟರ್ ಮಾಲೀಕ ಅಮಿತ್ ಕುಮಾರ್, ಅಮಿತ್ ಮಾಜ್ಹಿ, ಕಬೀರ್ ವರ್ಮ, ನಿಶಾಂತ್ ಕುಮಾರ್, ಅಶ್ವನಿ ಕುಮಾರ್ ಎಂಬುವರನ್ನು ಬಂಧಿಸಲಾಗಿದೆ. ಎಲ್ಲರನ್ನೂ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ:ಮಾಲೇಗಾಂವ್ನಲ್ಲಿ 30 ಖಡ್ಗಗಳು ಪತ್ತೆ, ಇಬ್ಬರ ಬಂಧನ : ಸಂಚು ತಪ್ಪಿಸಿದ್ರಾ ಪೊಲೀಸರು?