ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜೀವ ಬೆದರಿಕೆ ಆರೋಪ ಸಂಬಂಧ ಆಮ್ ಆದ್ಮಿ ಪಕ್ಷ ಶುಕ್ರವಾರ ರಾಜ್ಯ ಚುನಾವಣಾ ಆಯೋಗ ಮತ್ತು ಪೊಲೀಸರಿಗೆ ದೂರು ನೀಡಿದೆ. ಆಪ್ ನಾಯಕ ಸೌರಭ್ ಭಾರದ್ವಾಜ್ ನೇತೃತ್ವದ ಐವರು ಶಾಸಕರ ನಿಯೋಗ ರಾಜ್ಯ ಚುನಾವಣಾ ಆಯುಕ್ತ ವಿಜಯ್ ದೇವ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದೆ.
ಸೌರಭ್ ಭಾರದ್ವಾಜ್ ಅವರೊಂದಿಗೆ ಶಾಸಕರಾದ ಸಂಜೀವ್ ಝಾ, ಮದನ್ ಲಾಲ್, ಪ್ರವೀಣ್ ಕುಮಾರ್, ಸೋಮ್ ದತ್ ಸಹ ನಿಯೋಗದಲ್ಲಿದ್ದರು. ಚುನಾವಣಾ ಆಯೋಗದ ಜೊತೆಯಲ್ಲೇ ಐಪಿ ಎಸ್ಟೇಟ್ ಪೊಲೀಸ್ ಠಾಣೆಯಲ್ಲೂ ಆಪ್ ನಾಯಕರು ದೂರು ಸಲ್ಲಿಸಿದ್ದಾರೆ. ಸಿಎಂ ಅರವಿಂದ್ ಕೇಜ್ರಿವಾಲ್ ಹತ್ಯೆಯ ಸಂಚು ಬಿಜೆಪಿ ಸಂಸದ ಮನೋಜ್ ತಿವಾರಿಗೆ ತಿಳಿದಿದ್ದು, ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.
ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ನಂತರ ಸೌರಭ್ ಭಾರದ್ವಾಜ್ ಮಾತನಾಡಿ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹತ್ಯೆಯ ಸಂಚಿನ ಬಗ್ಗೆ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರು ಮತ್ತು ಸಂಸದರು ಚಾನೆಲ್‌ನಲ್ಲಿ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಈ ಮೂಲಕ ಕೇಜ್ರಿವಾಲ್ ಕೊಲೆಗೆ ಸಂಚು ರೂಪಿಸುತ್ತಿರುವ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಸಂಸದ ಮನೋಜ್ ತಿವಾರಿಯನ್ನು ಬಂಧಿಸಿ: ಕೇಜ್ರಿವಾಲ್ ಹತ್ಯೆಯ ಸಂಚಿನಲ್ಲಿ ಯಾರೆಲ್ಲಾ ಶಾಮೀಲಾಗಿದ್ದಾರೆ ಎಂಬ ಬಗ್ಗೆ ತಿಳಿಯಲು ಬಿಜೆಪಿ ಸಂಸದ ಮನೋಜ್ ತಿವಾರಿಯವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ನಾವು ಮನವಿ ಮಾಡಲಾಗಿದೆ. ಚುನಾವಣಾ ಆಯೋಗ ಸಹ ಈ ವಿಷಯವು ತುಂಬಾ ಗಂಭೀರವಾಗಿದೆ. ಹಿರಿಯ ನಾಯಕರಿಂದ ಇಂತಹ ಮಾತುಗಳನ್ನು ಬರುವುದು ತನಿಖೆಯ ವ್ಯಾಪ್ತಿಗೆ ಬರಬೇಕು ಎಂದು ಒಪ್ಪಿಕೊಂಡಿದೆ ಎಂಬುವುದಾಗಿ ಸೌರಭ್ ಭಾರದ್ವಾಜ್ ತಿಳಿಸಿದರು.
ಈ ಹಿಂದೆಯೂ ಕೇಜ್ರಿವಾಲ್ ಮೇಲೆ ಯಾವ ರೀತಿಯಲ್ಲಿ ಮಾರಣಾಂತಿಕ ದಾಳಿಗಳು ನಡೆದಿವೆ ಎಂಬುದು ಜಗತ್ತಿಗೆ ಗೊತ್ತಿದೆ. ಕಳೆದ ಚುನಾವಣಾ ಪ್ರಚಾರದ ವೇಳೆ ದೆಹಲಿ ಪೊಲೀಸರ ಭದ್ರತಾ ಬ್ಯಾರಿಕೇಡ್ಗಳನ್ನು ಮುರಿದು ಅರವಿಂದ್ ಕೇಜ್ರಿವಾಲ್ ಮೇಲೆ ದಾಳಿ ಮಾಡಲಾಗಿತ್ತು. ಇದೀಗ ಮತ್ತೆ ಅರವಿಂದ್ ಕೇಜ್ರಿವಾಲ್ ದೆಹಲಿ ಮತ್ತು ಗುಜರಾತ್ ಚುನಾವಣಾ ಪ್ರಚಾರದಲ್ಲಿ ಲಕ್ಷಾಂತರ ಜನರ ನಡುವೆ ಹೋಗುತ್ತಿದ್ದಾರೆ. ಅಂತಹ ಸಮಯದಲ್ಲಿ ಮತ್ತೆ ಕೇಜ್ರಿವಾಲ್ ಅವರ ಮೇಲೆ ದಾಳಿ ಮಾಡುವ ಆತಂಕ ಇದೆ ಎಂದು ಹೇಳಿದರು.
ಸಿಎಂ ಅರವಿಂದ್ ಕೇಜ್ರಿವಾಲ್ ಹತ್ಯೆಗೆ ಸಂಚು ರೂಪಿಸಲಾಗುತ್ತಿದೆ ಎಂಬುದು ಬಿಜೆಪಿ ಸಂಸದ ಮನೋಜ್ ತಿವಾರಿಗೆ ಗೊತ್ತಿದೆ. ಆದ್ದರಿಂದ ಈ ವಿಷಯದಲ್ಲಿ ಮನೋಜ್ ತಿವಾರಿ ಅವರನ್ನು ಬಂಧಿಸಬೇಕು. ಅಲ್ಲದೇ, ಅವರನ್ನು ವಿಚಾರಣೆಗೊಳಪಡಿಸಿದ ಬಳಿಕವಷ್ಟೇ ಈ ಎಲ್ಲ ಮಾಹಿತಿ ಹೊರ ಬೀಳಲಿದೆ. ದೆಹಲಿಯಲ್ಲಿ ಈಗ ಚುನಾವಣಾ ಮಾದರಿ ನೀತಿ ಸಂಹಿತೆ ಇರುವುದರಿಂದ ದೂರು ನೀಡಿದ್ದೇವೆ. ಚುನಾವಣಾ ಆಯೋಗಕ್ಕೆ ಎಲ್ಲ ಅಧಿಕಾರವಿದೆ. ಚುನಾವಣಾ ಆಯೋಗವು ನಮ್ಮ ಅಂಶಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದು ಭಾರದ್ವಾಜ್ ಮಾಹಿತಿ ನೀಡಿದರು.
ಇದನ್ನೂ ಓದಿ: ದೆಹಲಿ ಮದ್ಯ ಹಗರಣ: 10 ಸಾವಿರ ಪುಟಗಳ ಚಾರ್ಜ್ಶೀಟ್, ಡಿಸಿಎಂ ಸಿಸೋಡಿಯಾ ಹೆಸರಿಲ್ಲ