ದೇವಭೂಮಿ ದ್ವಾರಕಾ(ಗುಜರಾತ್): ಮಹಾರಾಷ್ಟ್ರ ಮೂಲದ ಮೀನುಗಾರನೊಬ್ಬನನ್ನು ಪಾಕಿಸ್ತಾನ ಕಡಲ ಭದ್ರತಾ ಸಂಸ್ಥೆ (ಪಿಎಂಎಸ್ಎ) ಸಿಬ್ಬಂದಿ ಗುಂಡಿಟ್ಟು ಕೊಂದಿದ್ದು, ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.
ಶನಿವಾರ ಸಂಜೆ ಸುಮಾರು 4 ಗಂಟೆಯ ವೇಳೆಗೆ ಅರಬ್ಬಿ ಸಮುದ್ರದ ಗುಜರಾತ್ ಕರಾವಳಿ ಸಮೀಪದಲ್ಲಿ ಜಲ್ಪಾರಿ ಎಂಬ ಬೋಟ್ನಲ್ಲಿ ಮೀನುಗಾರಿಕೆ ಮಾಡುತ್ತಿರಬೇಕಾದರೆ ಪಾಕಿಸ್ತಾನ ಕಡಲ ಭದ್ರತಾ ಸಂಸ್ಥೆ ಸಿಬ್ಬಂದಿ ಗುಂಡು ಹಾರಿಸಿದ್ದು, ಓರ್ವ ಸಾವನ್ನಪ್ಪಿದ್ದಾನೆ. ಬೋಟ್ನ ಮತ್ತೋರ್ವ ಸಿಬ್ಬಂದಿ ಗಾಯಗೊಂಡಿದ್ದಾನೆ ಎಂದು ದೇವಭೂಮಿ ದ್ವಾರಕಾ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಜೋಷಿ ಹೇಳಿದ್ದಾರೆ.
ಬೋಟ್ನಲ್ಲಿ ಒಟ್ಟು ಏಳು ಮಂದಿ ಇದ್ದು, ಮೃತಪಟ್ಟ ಮೀನುಗಾರ ಶ್ರೀಧರ್ ರಮೇಶ್ ಚಮ್ರೆ (32) ಮೃತದೇಹವನ್ನು ಓಖಾ ಬಂದರಿಗೆ ಭಾನುವಾರ ತರಲಾಗಿದೆ. ಪೋರ್ಬಂದರ್ ನವಿ ಬಂದರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಘಟನೆ ನಡೆದ ಸ್ಥಳ ಗುಜರಾತ್ ಕರಾವಳಿಯಿಂದ 12 ನಾಟಿಕಲ್ ಮೈಲುಗಳಷ್ಟು ದೂರವಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಶ್ರೀಧರ್ ಚಮ್ರೆ ಜಲ್ಪಾರಿ ಬೋಟ್ನಲ್ಲಿದ್ದು, ಅಕ್ಟೋಬರ್ 25ರಂದು ಬೇರೆ ಮೀನುಗಾರರೊಂದಿಗೆ ಸಮುದ್ರಕ್ಕೆ ಇಳಿದಿದ್ದನು. ಏಳು ಮಂದಿಯಲ್ಲಿ ಐವರು ಗುಜರಾತ್ನವರಾಗಿದ್ದು, ಇಬ್ಬರು ಮಹಾರಾಷ್ಟ್ರ ಮೂಲದವರೆಂದು ತಿಳಿದುಬಂದಿದೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕ್ರಿಪ್ಟೋ ಕರೆನ್ಸಿಯಲ್ಲಿ ಲಾಭದ ಆಸೆ ತೋರಿಸಿ ವಂಚನೆ: ಬೆಂಗಳೂರಿನಲ್ಲಿ ಮೂವರ ಬಂಧನ