ಇಂದೋರ್: ವಿವಿಧ ರೀತಿಯ ಅಪರೂಪದ ವನ್ಯಜೀವಿಗಳಿಗೆ ಹೆಸರು ವಾಸಿಯಾದ ಇಂದೋರ್‌ನ ಕಮಲಾ ನೆಹರು ಜೂಲಾಜಿಕಲ್ ಮ್ಯೂಸಿಯಂ ಪಾರ್ಕ್ನಲ್ಲಿ ನೀರಿನೊಳಗೆ ಅಕ್ವೇರಿಯಂ ನಿರ್ಮಿಸಲು ಪುರಸಭೆ ನಿರ್ಧರಿಸಿದ್ದು, ಅದಕ್ಕಾಗಿ 5 ಕೋಟಿ ರೂ. ಬಜೆಟ್ ಮೀಸಲಿರಿಸಿದೆ. ಈ ಅಕ್ವೇರಿಯಂ ಪಿಪಿಪಿ ವಿಧಾನದಲ್ಲಿ ಕಾರ್ಯನಿರ್ವಹಿಸಲಿದ್ದು, ಪ್ರವಾಸಿಗರನ್ನು ಆಕರ್ಷಿಸಲಿದೆ.
ಅಪರೂಪದ ಕಾಡು ಪ್ರಾಣಿಗಳ ವಾಸದಿಂದ ಪ್ರಸಿದ್ಧವಾಗಿರುವ ಮ್ಯೂಸಿಯಂನಲ್ಲಿ ಅಕ್ವೇರಿಯಂ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ವಿವಿಧ ದೇಶಗಳಿಂದ ನಾನಾ ಬಗೆಯ ಜಲಚರಗಳನ್ನು ತರಲಾಗುವುದು. ಅವುಗಳ ಪ್ರಕೃತಿಗೆ ತಕ್ಕಂತ ಪರಿಸರ ವ್ಯವಸ್ಥೆ ಅಕ್ವೇರಿಯಂನಲ್ಲಿ ನಿರ್ಮಿಸಲಾಗುತ್ತಿದೆ. ಅನುಭವಿ ಸಂಸ್ಥೆಗೆ ಇದರ ಜವಾಬ್ದಾರಿಯನ್ನು ನೀಡಲಾಗುತ್ತದೆ ಎಂದು ಪುರಸಭೆ ಆಯುಕ್ತ ಪ್ರತಿಭಾ ಪಾಲ್ ತಿಳಿಸಿದ್ದಾರೆ.
ವಸ್ತು ಸಂಗ್ರಹಾಲಯದ ಮುಖ್ಯದ್ವಾರದಲ್ಲಿ ಒಂದು ಎಕರೆ ಪ್ರದೇಶವನ್ನು ಮೀಸಲಿಡಲಾಗಿದೆ. ತಜ್ಞರ ಅಭಿಪ್ರಾಯ ಪಡೆದು ಯಾವ ಯಾವ ತರಹದ ಪ್ರಾಣಿಗಳನ್ನು ಸಂಗ್ರಹಿಸಬೇಕು ಎಂಬುವುದನ್ನು ತಿಳಿದುಕೊಳ್ಳಲಾಗುತ್ತದೆ. ಸಮುದ್ರ ಹಾಗೂ ಶುದ್ಧ ನೀರಿನಲ್ಲಿ ವಾಸಿಸುವ ಪ್ರಾಣಿಗಳನ್ನು ಸಂಗ್ರಹಿಸಲಾಗುತ್ತದೆ. ಸಣ್ಣ ಶಾರ್ಕ್ಗಳು ಸಹ ಇರುತ್ತವೆ. ಅಕ್ವೇರಿಯಂನನ್ನು ಸಂಬಧಪಟ್ಟ ಸಂಸ್ಥೆ ನಿರ್ವಹಣೆ ಮಾಡಲಿದೆ ಎಂದು ಪ್ರಾಣಿ ಸಂಗ್ರಹಾಲಯದ ಉಸ್ತುವಾರಿ ಡಾ. ಉತ್ತಮ್ ಯಾದವ್ ಮಾಹಿತಿ ನೀಡಿದರು.