ಮಲಪ್ಪುರಂ (ಕೇರಳ) : ಮಲಪ್ಪುರಂ ನಿವಾಸಿಯಾಗಿರುವ ಅನನ್ಯಾ ಕುಮಾರಿ ಅಲೆಕ್ಸ್ ಅವರು ಏಪ್ರಿಲ್ 6ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ವಿಧಾನ ಕದನದ ಕಣಕ್ಕಿಳಿದ ರಾಜ್ಯದ ಮೊದಲ ತೃತೀಯ ಲಿಂಗಿ ಅಭ್ಯರ್ಥಿ ಇವರಾಗಿದ್ದಾರೆ.
ಅನನ್ಯಾ ಕುಮಾರಿ ಅವರು ಮಲಪ್ಪುರಂನ ವೆಂಗರಾ ಕ್ಷೇತ್ರದಿಂದ ಡೆಮಾಕ್ರಟಿಕ್ ಸೋಷಿಯಲ್ ಜಸ್ಟೀಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ನಾಮಪತ್ರ ಸಲ್ಲಿಸಿದ್ದಾರೆ. ಇವರು ಕೇರಳದ ಮೊದಲ ತೃತೀಯ ಲಿಂಗಿ ರೇಡಿಯೋ ಜಾಕಿ ಕೂಡ ಹೌದು.
ಇದನ್ನೂ ಓದಿ: ಪ.ಬಂಗಾಳ ಚುನಾವಣೆ.. ದೀದಿ ನಾಡಲ್ಲಿ ನಾಮಪತ್ರ ಸಲ್ಲಿಸಿದ ಕ್ರಿಮಿನಲ್ಗಳು ಇಷ್ಟು..
ಇಂಡಿಯನ್ ಯೂನಿಯನ್ ಆಫ್ ಮುಸ್ಲಿಂ ಲೀಗ್ (ಐಯುಎಂಎಲ್) ಅಭ್ಯರ್ಥಿ ಪಿ ಕೆ ಕುನ್ಹಾಲಿಕುಟ್ಟಿ ಮತ್ತು ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ಅಭ್ಯರ್ಥಿ ಪಿ ಜೀಜಿ ವಿರುದ್ಧ ಅನನ್ಯಾ ಸ್ಪರ್ಧಿಸುತ್ತಿದ್ದು, ಚುನಾವಣೆಯಲ್ಲಿ ಇತಿಹಾಸ ಸೃಷ್ಟಿಸುವ ಭರವಸೆ ಹೊಂದಿದ್ದಾರೆ.
ಇದು ಸೋಲು ಅಥವಾ ಗೆಲುವಿನ ಪ್ರಶ್ನೆಯಲ್ಲ. ತನ್ನ ಜನರನ್ನು ಪ್ರತಿನಿಧಿಸುವ ಅವಕಾಶವಿದು. ನಾನು ಯಾರಿಗೂ ತಿಳಿದಿಲ್ಲದ ಪ್ರಪಂಚದ ಯಾವುದೋ ಮೂಲೆಯಲ್ಲಿ ವಾಸಿಸುತ್ತಿಲ್ಲ, ನಾನೂ ಕೂಡ ಇದೇ ಜಗತ್ತಿನಲ್ಲಿ ಎಲ್ಲರೊಂದಿಗೆ ಬದುಕುತ್ತಿದ್ದೇನೆ ಎಂಬುದನ್ನು ಸಾಬೀತು ಮಾಡುತ್ತೇನೆ.
ನನ್ನ ಎಲ್ಲಾ ಪ್ರಯತ್ನಗಳಿಂದ ಹೋರಾಡಿ ಗೆಲ್ಲುತ್ತೇನೆ. ರಾಜಕೀಯಕ್ಕೆ ಬರುವ ಉದ್ದೇಶ ಜನರ ಪ್ರತಿನಿಧಿಯಾಗುವುದು. ನಾನು ಗೆದ್ದರೆ ಒಬ್ಬ ನಾಯಕಿಯಾಗಿ ಸಮಾಜದ ಕಟ್ಟಕಡೆಯ ವರ್ಗದ ಜನರ ಜೀವನ ಮಟ್ಟ ಸುಧಾರಿಸುತ್ತೇನೆ ಎಂದು ಅನನ್ಯಾ ಹೇಳುತ್ತಾರೆ.