ಉತ್ತರಕಾಶಿ (ಉತ್ತರಾಖಂಡ) : ಬ್ಮಾಹ್ಮಣರಿಗೆ ಹೆಚ್ಚಾಗಿ ಸೀಮಿತವಾಗಿದ್ದ ಇಲ್ಲಿನ ವಿಶ್ವನಾಥ ಸಂಸ್ಕೃತ ಕಾಲೇಜಿನಲ್ಲಿ ಹೊಸ ಮನ್ವಂತರ ಶುರುವಾಗಿದೆ. 70 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಈ ವಿವಿಯಲ್ಲಿ ಇದೇ ಮೊದಲ ಬಾರಿಗೆ ಪರಿಶಿಷ್ಟ ಜಾತಿಯ (ಎಸ್ಸಿ) ವಿದ್ಯಾರ್ಥಿಯೊಬ್ಬ ಪ್ರವೇಶ ಪಡೆದಿದ್ದಲ್ಲದೇ, 2 ದಶಕಗಳ ಬಳಿಕ ವಿದ್ಯಾರ್ಥಿನಿಯರೂ ಸೇರಿದ್ದಾರೆ. ಈ ಮೂಲಕ ಕಾಲೇಜು ಸರ್ವಜನಾಂಗಕ್ಕೆ ತನ್ನನ್ನು ತೆರೆದುಕೊಂಡಿದೆ. ಇವರಿಗೆ ವೇದಾಧ್ಯಯನ, ಜ್ಯೋತಿಷ್ಯವನ್ನು ಬೋಧಿಸಲಾಗುತ್ತದೆ.
ಈ ಹಿಂದೆ ಮುಸ್ಲಿಂ ವಿದ್ಯಾರ್ಥಿಗಳು ಕೂಡ ಇಲ್ಲಿ ವೇದಾಧ್ಯಯನ ಮಾಡಿದ್ದಾರೆ. ಇದೀಗ ಪ್ರಪ್ರಥಮ ಬಾರಿಗೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿ ಪ್ರವೇಶ ಪಡೆದಿದ್ದಾನೆ. ಜೊತೆಗೆ ವಿದ್ಯಾರ್ಥಿನಿಯರೂ ಮರಳಿದ್ದು, ಕಾಲೇಜಿನಲ್ಲಿ ಈಗ ಯಾವುದೇ ಜಾತಿ ಮತ್ತು ಧರ್ಮದ ವಿದ್ಯಾರ್ಥಿಗಳು ಸಂಸ್ಕೃತ ಶಿಕ್ಷಣವನ್ನು ಪಡೆಯಬಹುದು.
ಕಾಲೇಜಿನ ಇತಿಹಾಸ: ಉತ್ತರಕಾಶಿ ಜಿಲ್ಲಾ ಕೇಂದ್ರದಲ್ಲಿರುವ ಶ್ರೀ ವಿಶ್ವನಾಥ ಸಂಸ್ಕೃತ ಕಾಲೇಜನ್ನು 1953 ರಲ್ಲಿ ಬ್ರಹ್ಮಸ್ವರೂಪಾನಂದರು 8 ಬ್ರಾಹ್ಮಣ ವಿದ್ಯಾರ್ಥಿಗಳೊಂದಿಗೆ ಸ್ಥಾಪಿಸಿದ್ದರು. ಇಲ್ಲಿ ಮೊದಲು ಬ್ರಾಹ್ಮಣ ಸಮುದಾಯದ ಮಕ್ಕಳಿಗೆ ಮಾತ್ರ ಸಂಸ್ಕೃತ ಶಿಕ್ಷಣವನ್ನು ಹೇಳಿಕೊಡಲಾಗುತ್ತಿತ್ತು. ಕಾಲಾನಂತರದಲ್ಲಿ ಹೆಣ್ಣು ಮಕ್ಕಳು ಪ್ರವೇಶ ಪಡೆದುಕೊಂಡಿದ್ದರು. ಇಲ್ಲಿ 6 ನೇ ತರಗತಿಯಿಂದ ಶಿಕ್ಷಣ ಲಭ್ಯವಿದೆ. ಶಾಸ್ತ್ರಿ ಮತ್ತು ಆಚಾರ್ಯ ಎಂಬ ಎರಡು ವಿಭಾಗಗಳಲ್ಲಿ ಶಿಕ್ಷಣ ಬೋಧಿಸಲಾಗುತ್ತದೆ. ಸದ್ಯ ಸಂಸ್ಕೃತ ಕಾಲೇಜಿನಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಎಸ್ಸಿ ವಿದ್ಯಾರ್ಥಿ ಪ್ರವೇಶ: ಸಮಾಜದ ಕೆಳವರ್ಗ ಎಂದೇ ಗುರುತಿಸಲಾಗುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಯೊಬ್ಬ ಸಂಸ್ಕೃತ ಅಧ್ಯಯನಕ್ಕೆ ಪ್ರವೇಶ ಪಡೆದಿದ್ದು, ಕಾಲೇಜು ಇತಿಹಾಸದಲ್ಲಿ ಇದೇ ಮೊದಲಾಗಿದೆ. ಇದಲ್ಲದೇ, 2 ದಶಕಗಳ ಬಳಿಕ 7 ವಿದ್ಯಾರ್ಥಿನಿಯರು ಕೂಡ ಮರಳಿದ್ದಾರೆ. ಶಾಸ್ತ್ರಿ ವಿಭಾಗದ ಪ್ರಥಮ ವರ್ಷದಲ್ಲಿ ಮೂವರು, ದ್ವಿತೀಯ ವರ್ಷಕ್ಕೆ ಇಬ್ಬರು ಸೇರಿಕೊಂಡಿದ್ದಾರೆ. ಆಚಾರ್ಯ ವಿಭಾಗದಲ್ಲಿ ಇಬ್ಬರಿದ್ದಾರೆ.
ಕಾಲೇಜಿನ ಪದವಿ ವಿಭಾಗದ ಪ್ರಾಂಶುಪಾಲ ಡಾ.ದ್ವಾರಿಕಾ ಪ್ರಸಾದ್ ನೌಟಿಯಾಲ್ ಮಾತನಾಡಿ, ಈ ಹಿಂದೆಯೂ ಕಾಲೇಜು ಪ್ರವೇಶಕ್ಕೆ ಜಾತಿ, ಧರ್ಮದ ನಿರ್ಬಂಧ ಇರಲಿಲ್ಲ. ಮಾಹಿತಿ ಕೊರತೆಯಿಂದ ಬೇರೆ ವಿದ್ಯಾರ್ಥಿಗಳು ಬರುತ್ತಿರಲಿಲ್ಲ. ಮುಸ್ಲಿಂ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡಿದ್ದಾರೆ. ಈ ವರ್ಷ ಪ್ರಥಮ ಬಾರಿಗೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿಯೊಬ್ಬರು ಪ್ರವೇಶ ಪಡೆದಿದ್ದಾರೆ. ಈ ವಿದ್ಯಾರ್ಥಿಗೆ ಸಂಸ್ಕೃತದ ಬಗ್ಗೆ ವಿಶೇಷ ಆಸಕ್ತಿ. ಇಲ್ಲಿ ಯಾವುದೇ ತಾರತಮ್ಯವಿಲ್ಲದೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಸಂಸ್ಕೃತ ಬಾರದ ವಿದ್ಯಾರ್ಥಿಗಳೂ ಇಲ್ಲಿ ಪ್ರವೇಶ ಪಡೆಯಬಹುದು. 12ನೇ ತರಗತಿಗೂ ಇಲ್ಲಿ ಪ್ರವೇಶ ಪಡೆದಿದ್ದಾರೆ. ಅಂಥವರಿಗೆ 6 ತಿಂಗಳ ಅಧ್ಯಯನ ಅವಕಾಶ ಇರಲಿದೆ. ಸಂಸ್ಕೃತ ಜ್ಞಾನ ಪರೀಕ್ಷೆಯಲ್ಲಿ ಅವರು ಉತ್ತೀರ್ಣರಾಗಬೇಕು ಎಂದು ತಿಳಿಸಿದರು.
ಶಾಲಾ ವ್ಯವಸ್ಥಾಪಕ ಡಾ.ರಾಧೆಶ್ಯಾಮ್ ಖಂಡೂರಿ ಮಾತನಾಡಿ, ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಡಾ.ರಮೇಶ್ ಪೋಖ್ರಿಯಾಲ್ ನಿಶಾಂಕ್, ಶ್ರೀನಗರ ಗಡ್ವಾಲ್ ವಿಶ್ವವಿದ್ಯಾಲಯದ ಡೀನ್, ಪ್ರಾಧ್ಯಾಪಕರಾಗಿರುವ ದ್ವಾರಿಕಾ ಪ್ರಸಾದ್ ತ್ರಿಪಾಠಿ, ಪ್ರಸಿದ್ಧ ವ್ಯಾಸ್ ಗೋಪಾಲ್ ಮಣಿ, ಗರ್ವಾಲ್ ರೈಫಲ್‌ನ ಕ್ಯಾಪ್ಟನ್ ರಾಜೇಂದ್ರ ಶರ್ಮಾ ಸೇರಿದಂತೆ ಮುಂತಾದ ಪ್ರಸಿದ್ಧರು ಈ ಕಾಲೇಜಿನಲ್ಲಿ ಶಿಕ್ಷಣ ಪಡೆದವರು ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: ಉಜ್ವಲ ಫಲಾನುಭವಿಗಳಿಗೆ ಕೇಂದ್ರದಿಂದ ಖುಷಿ ಸುದ್ದಿ: ಎಲ್ಪಿಜಿ ಸಿಲಿಂಡರ್ ಸಬ್ಸಿಡಿ 300 ರೂ.ಗೆ ಹೆಚ್ಚಳ