ಸತಾರಾ(ಮಹಾರಾಷ್ಟ್ರ): ಸೈನಿಕರ ಜಿಲ್ಲೆ ಎಂದೇ ಖ್ಯಾತಿ ಪಡೆದಿರುವ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಸೈನಿಕ ಶಾಲೆಗೆ ಪ್ರಥಮ ಬಾರಿಗೆ 10 ಬಾಲಕಿಯರು ಪ್ರವೇಶ ಪಡೆದಿದ್ದಾರೆ. 61 ವರ್ಷಗಳ ಈ ಸೇನಾ ಶಾಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಬಾಲಕಿಯರಿಗೆ ಇಲ್ಲಿ ಅವಕಾಶ ನೀಡಲಾಗಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಸೇನಾ ಶಾಲೆಗೆ ಭೇಟಿ ನೀಡಿದ್ದ ಈಟಿವಿ ಭಾರತ ಜೊತೆ ಇಲ್ಲಿನ ಉಪ ಪ್ರಾಂಶುಪಾಲ ವಿಂಗ್ ಕಮಾಂಡರ್ ಬಿ ಲಕ್ಷ್ಮೀಕಾಂತ್ ಮಾಹಿತಿ ಹಂಚಿಕೊಂಡಿದ್ದಾರೆ. ಮಹಾರಾಷ್ಟ್ರದ ಹರಿಕಾರ ಮಾಜಿ ಮುಖ್ಯಮಂತ್ರಿ ಯಶವಂತರಾವ್ ಚವಾಣ್ (ಜೂನ್ 23, 1961)ರ ಉಪಕ್ರಮದ ಮೇಲೆ ದೇಶದ ಮೊದಲ ಬಾರಿಗೆ ಸತಾರಾದಲ್ಲಿ ಸೇನಾ ಶಾಲೆಯ ಆರಂಭಿಸಲಾಗಿದ್ದು, ಇಲ್ಲಿ 630 ವಿದ್ಯಾರ್ಥಿಗಳ ಪೈಕಿ 10 ಬಾಲಕಿಯರು ಸೇರ್ಪಡೆಯಾಗಿದ್ದಾರೆ.
ಈ ವಸತಿ ಶಾಲೆಯು 6 ರಿಂದ 12 ನೇ ತರಗತಿಯವರೆಗೆ ಶಿಕ್ಷಣವನ್ನು ಒದಗಿಸುತ್ತದೆ. ಇಲ್ಲಿ ಒಟ್ಟು 640 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇವರಲ್ಲಿ 10 ಬಾಲಕಿಯರು ಈ ವರ್ಷ ಪ್ರಥಮ ಬಾರಿಗೆ ಪ್ರವೇಶ ಪಡೆದಿದ್ದಾರೆ. ಇಲ್ಲಿಯವರೆಗೆ ಶಾಲೆಯಲ್ಲಿ ಬಾಲಕರಿಗೆ ಮಾತ್ರ ಪ್ರವೇಶವಿತ್ತು. ಸೇನಾ ವಸತಿ ಶಾಲೆಯಲ್ಲಿ ಓದುತ್ತಿರುವ ಬಾಲಕಿಯರ ಮೊದಲ ಬ್ಯಾಚ್ ಇದಾಗಿದ್ದು, ಭವಿಷ್ಯದಲ್ಲಿ ಬಾಲಕಿಯರ ಸೀಟುಗಳು ಹೆಚ್ಚಾಗಲಿವೆ ಎಂದು ಮುಂದಿನ ಯೋಜನೆ ಬಗ್ಗೆ ವಿವರಿಸಿದರು.
ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ (ಎನ್‌ಡಿಎ) ಹೆಣ್ಣುಮಕ್ಕಳನ್ನು ಸೇರಿಸಿಕೊಳ್ಳಲು ಸರ್ಕಾರ ಕಳೆದ ವರ್ಷ ನಿರ್ಧರಿಸಿತ್ತು. ಆದ್ದರಿಂದ ಕಳೆದ 61 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸೈನಿಕ ಶಾಲೆಯ ಬಾಗಿಲು ಹೆಣ್ಣು ಮಕ್ಕಳಿಗಾಗಿ ತೆರೆಯಲಾಗಿದೆ. 10 ಮಂದಿ ಬಾಲಕಿಯರಲ್ಲಿ ಇಬ್ಬರು ಪಶ್ಚಿಮ ಬಂಗಾಳದವರು, ಒಬ್ಬರು ಬಿಹಾರದವರು ಮತ್ತು ಇತರ ಏಳು ಮಂದಿ ಮಹಾರಾಷ್ಟ್ರದವರಾಗಿದ್ದಾರೆ.
ಇದನ್ನೂ ಓದಿ: ಮಹಿಳಾ ದಿನ: ರಾಜ್ಯ ಮುನ್ನಡೆಸುವ ಸಂಕಲ್ಪ ಮಾಡುವಂತೆ ಮಹಿಳೆಯರಿಗೆ ಸಿಎಂ ಕರೆ..!