ಅಬುಧಾಬಿ/ಪಾಟ್ನಾ: ಅಮೆರಿಕದ ನ್ಯೂಜೆರ್ಸಿಯಲ್ಲಿ ಅಕ್ಷರಧಾಮ ಉದ್ಘಾಟನೆಯಾದ ಬೆನ್ನಲ್ಲೇ, ಇನ್ನೊಂದು ಭವ್ಯ ಹಿಂದು ದೇವಾಲಯ ಮುಸ್ಲಿಂ ರಾಷ್ಟ್ರವಾದ ಯುಎಇಯ ಅಬುಧಾಬಿಯಲ್ಲಿ ನಿರ್ಮಾಣವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವರ್ಷ ದೇಗುಲವನ್ನು ಉದ್ಘಾಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಬುಧಾಬಿಯಲ್ಲಿ ನಿರ್ಮಿಸಲಾಗುತ್ತಿರುವ ದೇವಾಲಯದ ಕಾಮಗಾರಿಯನ್ನು ವೀಕ್ಷಿಸಲು ತೆರಳಿರುವ ಕೇಂದ್ರ ಸಚಿವ ಅಶ್ವಿನಿ ಚೌಬೆ, ಕಾಮಗಾರಿ ನಡೆಯುತ್ತಿರುವ ಎಲ್ಲ ಭಾಗಗಳಿಗೂ ಭೇಟಿ ನೀಡಿದರು. ಮುಂದಿನ ವರ್ಷ ಮಂದಿರದ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ದೇವಾಲಯದ ಕೆಲಸ ವೇಗವಾಗಿ ಮುಗಿಯುತ್ತಿದೆ. 2024 ರ ಫೆಬ್ರವರಿಯಲ್ಲಿ ಉದ್ಘಾಟನೆಗೆ ಸಿದ್ಧವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. 55,000 ಚದರ ಮೀಟರ್ ವಿಸ್ತೀರ್ಣದಲ್ಲಿ ದೇವಾಲಯ ನಿರ್ಮಿಸಲಾಗುತ್ತಿದೆ. ಇದು ಭಾರತದ ನಾಗರಿಕತೆ ಮತ್ತು ಸಂಸ್ಕೃತಿಯ ಗುರುತಾಗಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ಚೌಬೆ ಶಿಲಾಪೂಜೆ ಮತ್ತು ಕರಸೇವೆ ಪೂರೈಸಿದ ಬಳಿಕ ಹೇಳಿದರು.
ದೇವಾಲಯದ ವಿಶೇಷತೆ: 27 ಎಕರೆಯಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗುತ್ತಿದೆ. ಗಂಗಾ, ಯಮುನಾ ಮತ್ತು ಸರಸ್ವತಿಯ ಕಾಲ್ಪನಿಕ ಸಂಗಮದಲ್ಲಿ ಇದು ಸಿದ್ಧವಾಗುತ್ತಿದೆ. ಮೂರು ನದಿಗಳ ನೀರನ್ನು ಇಲ್ಲಿ ಬಳಸಲಾಗಿದೆ. ಭಾರತದ ದೇವಾಲಯಗಳಷ್ಟೇ ಭವ್ಯತೆಯನ್ನು ಇದು ಹೊಂದಿರಲಿದೆ ಎಂದರು.
2018 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇವಾಲಯದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಯುಎಇಯಲ್ಲಿ ನೆಲೆಸಿರುವ 35 ಲಕ್ಷ ಭಾರತೀಯರ ಆಧ್ಯಾತ್ಮಿಕ ಕ್ಷೇತ್ರವಾಗಿ ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಯುಎಇ ಪ್ರವಾಸದ ವೇಳೆ ಸ್ವಾಮಿನಾರಾಯಣ ಮಂದಿರಕ್ಕೂ ಪ್ರಧಾನಿ ಅಡಿಪಾಯ ಹಾಕಿದ್ದರು.
ಅಕ್ಷರಧಾಮ ಮಹಾಮಂದಿರ ಉದ್ಘಾಟನೆ: ಅಮೆರಿಕದ ನ್ಯೂಜೆರ್ಸಿಯಲ್ಲಿ ವಿಶ್ವದ ಅತ್ಯಂತ ದೊಡ್ಡ ಆಧುನಿಕ ಹಿಂದು ದೇಗುಲವಾದ ಅಕ್ಷರಧಾಮವನ್ನು ಅಕ್ಟೋಬರ್ 8 ರಂದು ಉದ್ಘಾಟನೆ ಮಾಡಲಾಗಿದೆ. ಇದು 191 ಅಡಿ ದೊಡ್ಡದಾಗಿದೆ. 10 ಸಾವಿರ ಪ್ರತಿಮೆಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಭಾರತದ ಹೊರಗೆ ನಿರ್ಮಾಣಗೊಂಡಿರುವ ಅತ್ಯಂತ ದೊಡ್ಡ ಹಿಂದೂ ದೇಗುಲ ಎಂಬ ಖ್ಯಾತಿಗೆ ಇದು ಪಾತ್ರವಾಗಿದೆ. ನ್ಯೂಜೆರ್ಸಿಯ ರಾಬಿನ್ಸ್‌ವಿಲ್ಲೆಯಲ್ಲಿ ಈ ಮಂದಿರವಿದೆ. ಎರಡು ಮಿಲಿಯನ್ ಚದರಡಿಯಷ್ಟು ಕಲ್ಲುಗಳನ್ನು ನುರಿತ ಕುಶಲಕರ್ಮಿಗಳು ತಮ್ಮ ಕೈಗಳಿಂದಲೇ ಕೆತ್ತಿರುವುದು ಈ ಭವ್ಯ ಮಂದಿರದ ವಿಶೇಷತೆ.
ಇದನ್ನೂ ಓದಿ: ವಿಶ್ವದ ಅತಿದೊಡ್ಡ ಹಿಂದೂ ದೇವಾಲಯ ಅಮೆರಿಕದ ನ್ಯೂಜೆರ್ಸಿಯಲ್ಲಿ ಅ.8 ರಂದು ಲೋಕಾರ್ಪಣೆ