ಹೈದರಾಬಾದ್ : ಪರಿಣಯ ಅಥವಾ ದಾಂಪತ್ಯ ಎಂದು ಕರೆಯಲ್ಪಡುವ ಮದುವೆಯು ಸಾಮಾಜಿಕವಾಗಿ ಅಥವಾ ಶಾಸ್ತ್ರೋಕ್ತವಾಗಿ ಗುರುತಿಸಲ್ಪಟ್ಟ ಸಂಗಾತಿಗಳ ನಡುವಿನ ಒಕ್ಕೂಟ ಅಥವಾ ಕಾನೂನಾತ್ಮಕ ಒಪ್ಪಂದ. ಇದು ಸಾಮಾನ್ಯವಾಗಿ ಲೈಂಗಿಕ ಸಂಬಂಧಗಳನ್ನು ಅಂಗೀಕರಿಸುವ ಸಂಪ್ರದಾಯವಾಗಿದೆ. ಕೆಲವು ಸಂಸ್ಕೃತಿಗಳಲ್ಲಿ, ಯಾವುದೇ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವ ಮುನ್ನ ಮದುವೆಯನ್ನು ಶಿಫಾರಸು ಮಾಡಲಾಗುತ್ತದೆ ಅಥವಾ ಕಡ್ಡಾಯವೆಂದು ಪರಿಗಣಿಸಲಾಗುತ್ತದೆ. ವಿಶಾಲ ವ್ಯಾಪ್ತಿಯಲ್ಲಿ ಹೇಳುವುದಾದರೆ, ಮದುವೆಯನ್ನು ಸಾಂಸ್ಕೃತಿಕ ಸಾರ್ವತ್ರಿಕ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಗಂಡು- ಹೆಣ್ಣಿನ ಬೆಸುಗೆ ಅತ್ಯಂತ ಮುಖ್ಯ. ಆದರೆ, ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಮೊದಲ ಬಾರಿಗೆ ಸಲಿಂಗಪ್ರೇಮಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ತೆಲಂಗಾಣದಲ್ಲಿ ಮೊದಲ ಸಲಿಂಗಕಾಮಿ ವಿವಾಹ ನಡೆದಿದೆ. ಹೈದರಾಬಾದ್ ಇದಕ್ಕೆ ವೇದಿಕೆಯಾಗಿದೆ. 8 ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದ ಇಬ್ಬರು ಪುರುಷರು ಮದುವೆ ಆಗುವ ಮೂಲಕ ತಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ. LGBTQ ಸಮುದಾಯವು ಕುಟುಂಬ ಮತ್ತು ಸ್ನೇಹಿತರ ಜೊತೆಗೆ ಮದುವೆಯಲ್ಲಿ ಭಾಗವಹಿಸಿ ಸಲಿಂಗ ದಂಪತಿಗೆ ಆಶೀರ್ವದಿಸಿದ್ದಾರೆ.
ಭಾಜಾಭಜಂತ್ರಿಗಳು.. ಸುತ್ತಮುತ್ತ ಬಂಧುಗಳು.. ಮೆಹಂದಿ ಸಂಭ್ರಮ.. ಇವೆಲ್ಲವೂ ಈ ಮದುವೆಯಲ್ಲಿ ತುಂಬಾನೆ ಅದ್ಧೂರಿಯಾಗಿ ಜರುಗಿತು. ದೇಶದ ಹಲವೆಡೆ ಇದುವರೆಗೆ ಲೆಸ್ಬಿಯನ್ ಮತ್ತು ಗೇ ವಿವಾಹಗಳು ಸಾಮಾನ್ಯ ಎಂಬಂತೆ ನಡೆದಿವೆ. ಆದರೆ, ತೆಲಂಗಾಣದಲ್ಲಿ ಇದೇ ಮೊದಲ ಬಾರಿಗೆ ಈ ವಿಶೇಷ ಮದುವೆ ನೆರವೇರಿದೆ.
ಶನಿವಾರ (ಡಿಸೆಂಬರ್ 08) ರಂದು ವಿಕಾರಾಬಾದ್‌ನ ಖಾಸಗಿ ರೆಸಾರ್ಟ್‌ನಲ್ಲಿ ಈ ಸಲಿಂಗಪ್ರೇಮಿ ಜೋಡಿಯಾದ ಸುಪ್ರಿಯೋ ಚಕ್ರವರ್ತಿ ಮತ್ತು ಅಭಯ್ ಡಾಂಗ್ ವಿವಾಹ ಮಾಡಿಕೊಂಡಿದ್ದಾರೆ. ಹಿರಿಯರ ಸಮ್ಮುಖದಲ್ಲಿ ಇವರ ಮದುವೆ ಅದ್ಧೂರಿಯಾಗಿ ನೆರವೇರಿದ್ದು, ಸಮಾರಂಭದಲ್ಲಿ ಪರಸ್ಪರ ಉಂಗುರ ಬದಲಾಯಿಸಿಕೊಂಡರು.
ವಿವಾಹದಲ್ಲಿ ನವವಿವಾಹಿತರ ಕುಟುಂಬ ಸದಸ್ಯರು, ಆಪ್ತ ಸ್ನೇಹಿತರು ಮತ್ತು LGBTQ ಸಮುದಾಯದ ಕೆಲವು ಸದಸ್ಯರು ಭಾಗವಹಿಸಿದ್ದರು. ಆಪ್ತರು ಅವರಿಗೆ ಅದ್ಧೂರಿಯಾದ ಶುಭಾಶಯಗಳನ್ನ ಹೇಳಿದರು.
ಮದುವೆಯಲ್ಲಿ ಹೈದರಾಬಾದ್‌ನ ಕೆಲವು ತೃತೀಯಲಿಂಗಿ ಮಹಿಳೆಯರೂ ಸಹ ಭಾಗವಹಿಸಿದ್ದರು. ಇವರು ಸಲಿಂಗಕಾಮಿ ಜೋಡಿಗೆ ಆಶೀರ್ವಾದ ಮಾಡಿದ್ದು ವಿಶೇಷವಾಗಿತ್ತು. ಅಧಿಕೃತವಾಗಿ ಸರ್ಟಿಫಿಕೇಟ್ ಸಿಗದಿದ್ದರೂ ತಮ್ಮ ಮದುವೆಯನ್ನು ಸಂಭ್ರಮಾಚರಣೆ ಮಾಡಬೇಕೆಂದುಕೊಂಡಿದ್ದೇವೆ. ಅದಕ್ಕಾಗಿಯೇ ಪಂಜಾಬ್ ಮತ್ತು ಕೋಲ್ಕತ್ತಾದಿಂದ ಸ್ಪೆಷಲ್ ಡ್ರೆಸ್ ಡಿಸೈನ್ ಮಾಡಿ ಮದುವೆ ಮಾಡಿಕೊಂಡಿದ್ದೇವೆ ಎಂದು ಸುಪ್ರಿಯೋ 'ಈಟಿವಿ ಭಾರತ' ಜೊತೆ ಸಂತಸ ಹಂಚಿಕೊಂಡಿದ್ದಾರೆ.
ಡೇಟಿಂಗ್ ಮುಖಾಂತರ ಆಪ್ತರಾದ ಜೋಡಿ:
ಸುಪ್ರಿಯೋ ಚಕ್ರವರ್ತಿ ಪಶ್ಚಿಮ ಬಂಗಾಳ ಮತ್ತು ಹೈದರಾಬಾದ್‌ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಅಭಯ್ ಪಂಜಾಬ್ ಮೂಲದವರಾಗಿದ್ದು, ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಪ್ರಿಯೋಗೆ 31 ವರ್ಷ. ಅಭಯ್‌ಗೆ 34 ವರ್ಷ. ಚಿಕ್ಕಂದಿನಲ್ಲೇ ತಾವಿಬ್ಬರೂ ‘ಗೇ’ ಎಂದು ಅರಿತಿದ್ದವರು. 8 ವರ್ಷಗಳ ಹಿಂದೆ ಡೇಟಿಂಗ್ ಆ್ಯಪ್ ಮೂಲಕ ಇಬ್ಬರು ಭೇಟಿಯಾಗಿದ್ದರಂತೆ. ಆ ಸ್ನೇಹ ಇಬ್ಬರ ನಡುವೆ ಪ್ರೇಮಕ್ಕೆ ತಿರುಗಿ ಅಂದಿನಿಂದ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರಂತೆ. ಈ ಇಬ್ಬರು ದಂಪತಿ ಆಗಿದ್ದಾರೆ.
ಇವರ ಮದುವೆಗೆ ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಕೂಡ ಬೆಂಬಲ ನೀಡಿ ಶುಭ ಹಾರೈಸಿದ್ದಾರೆ.