ಕನೌಜ್ (ಉತ್ತರ ಪ್ರದೇಶ): ಕನೌಜ್ ಜಿಲ್ಲೆಯಲ್ಲಿ ರೌಡಿಶೀಟರ್, ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ವಿಷ್ಣುಗಾನ್ ಪೊಲೀಸ್ ಠಾಣೆಯ ಪೊಲೀಸರು ಸೋಮವಾರ ಸಂಜೆ, ನೋಟಿಸ್ ಅಂಟಿಸಲು ರೌಡಿಶೀಟರ್ ಮನೆಗೆ ತೆರಳಿದ್ದರು. ಈ ವೇಳೆ, ರೌಡಿಶೀಟರ್ ತನ್ನ ಪುತ್ರನೊಂದಿಗೆ ಪೊಲೀಸ್ ತಂಡದ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾನೆ.
ಗುಂಡಿನ ಚಕಮಕಿಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರೀಜೆನ್ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ಕಾನ್ಸ್ಟೇಬಲ್ ಸಚಿನ್ ರಾಠಿ ಮೃತಪಟ್ಟಿದ್ದಾರೆ. ಎಲ್ಲ ಕಡೆಯಿಂದ ಪೊಲೀಸರು ಮನೆಯನ್ನು ಸುತ್ತುವರಿದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಗುಂಡಿನ ಚಕಮಕಿ ನಡೆದ ಸ್ಥಳದಲ್ಲಿ ಕೋಲಾಹಲ ಉಂಟಾಗಿದೆ.
ವಿಷ್ಣುಗನ್ ಪೊಲೀಸ್ ಠಾಣಾ ವ್ಯಾಪ್ತಿಯ ಧರಣಿ ಧೀರ್‌ಪುರ ನಗರಿಯ ನಿವಾಸಿ ರೌಡಿಶೀಟರ್ ಅಶೋಕ್ ಅಲಿಯಾಸ್ ಮುನ್ನಾ ಯಾದವ್ ಅವರ ಮನೆಗೆ ನೋಟಿಸ್ ಅಂಟಿಸಲು ಪೊಲೀಸರು ತೆರಳಿದ್ದರು. ಈ ವೇಳೆ, ತನ್ನ ಪುತ್ರನೊಂದಿಗೆ ಮನೆಯಲ್ಲಿದ್ದ ರೌಡಿಶೀಟರ್ ಮನಬಂದಂತೆ ಗುಂಡು ಹಾರಿಸಿದ್ದಾನೆ. ಈ ಗುಂಡಿನ ದಾಳಿಯಲ್ಲಿ ಕಾನ್ಸ್ಟೇಬಲ್ ಸಚಿನ್ ರಾಠಿ ಅವರಿಗೆ ಗುಂಡು ತಗುಲಿದೆ. ಗುಂಡಿನ ದಾಳಿಯಿಂದ ಪೊಲೀಸ್ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಕಾನ್ಸ್ಟೇಬಲ್ನನ್ನು ಚಿಕಿತ್ಸೆಗಾಗಿ ಕನೌಜ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಸ್ಥಿತಿ ಕಂಡ ವೈದ್ಯರು, ಕಾನ್ಸ್ಟೇಬಲ್ನನ್ನು ಕಾನ್ಪುರಕ್ಕೆ ಕಳುಹಿಸಿದ್ದಾರೆ.
ಚಿಕಿತ್ಸೆ ಫಲಿಸದೇ ಕಾನ್ಸ್ಟೇಬಲ್ ಸಾವು: ಕಾನ್‌ಪುರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ಕಾನ್ಸ್ಟೇಬಲ್ ಸಚಿನ್ ರಾಠಿ ಸಾವನ್ನಪ್ಪಿದ್ದಾರೆ. ಪೊಲೀಸ್ ತಂಡದ ಮೇಲೆ ರೌಡಿಶೀಟರ್ ಗುಂಡು ಹಾರಿಸಿದ ಘಟನೆಯಿಂದ ಪೊಲೀಸ್ ಇಲಾಖೆಯು ಆತಂಕಕ್ಕೆ ಒಳಗಾಗಿತ್ತು. ಈ ವೇಳೆ ಪೊಲೀಸ್ ತಂಡ ಪ್ರತಿದಾಳಿ ನಡೆಸಿದೆ. ಮಾಹಿತಿ ಪಡೆದ ಹಲವಾರು ಪೊಲೀಸ್ ಠಾಣೆಗಳ ಪಡೆಗಳು ಎಲ್ಲ ಕಡೆಯಿಂದಲೂ ಮನೆಯನ್ನು ಸುತ್ತುವರೆದಿವೆ. ಮೂಲಗಳಿಂದ ದೊರೆತ ಮಾಹಿತಿಯ ಪ್ರಕಾರ, ರೌಡಿಶೀಟರ್ ಹಾಗೂ ಆತನ ಪುತ್ರನನ್ನು ಬಂಧಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ.
ರೌಡಿಶೀಟರ್ ಅಶೋಕ್ ಅಲಿಯಾಸ್ ಮುನ್ನಾ ಯಾದವ್ಗೆ ನ್ಯಾಯಾಲಯ ಎನ್‌ಬಿಡಬ್ಲ್ಯೂ ವಾರಂಟ್ ಜಾರಿ ಮಾಡಿತ್ತು. ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲು ಪೊಲೀಸ್ ತಂಡವು ರೌಡಿಶೀಟರ್ ಮನೆಗೆ ತಲುಪಿತ್ತು. ಅಷ್ಟರಲ್ಲಿ ರೌಡಿಶೀಟರ್ ತನ್ನ ಮಗನ ಜೊತೆ ಸೇರಿ ಮನೆಯೊಳಗಿಂದ ಗುಂಡು ಹಾರಿಸತೊಡಗಿದ್ದನು. ಗುಂಡಿನ ದಾಳಿಯಲ್ಲಿ ಪೊಲೀಸ್ ಪೇದೆ ಮೃತಪಟ್ಟಿದ್ದಾರೆ ಎಂದು ಎಸ್‌ಪಿ ಅಮಿತ್ ಕುಮಾರ್ ಆನಂದ್ ಹೇಳಿದ್ದಾರೆ.
ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಗುಂಡು ತಗುಲಿ ತಂದೆ, ಮಗ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಪೊಲೀಸರು ಇಬ್ಬರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದರೊಂದಿಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ಇದನ್ನೂ ಓದಿ: ಹಾವೇರಿ ಪ್ರವಾಸಕ್ಕಾಗಿ ಬಂದಿದ್ದ ರಾಯಚೂರಿನ ಶಾಲಾ ಬಸ್ ಪಲ್ಟಿ: ಮೂವರು ಮಕ್ಕಳು ಸೇರಿ ನಾಲ್ವರಿಗೆ ಗಾಯ