ಜನಗಾಮ: ವರಂಗಲ್ 1 ಡಿಪೋಗೆ ಸೇರಿದ್ದ ಸೂಪರ್ ಲಗ್ಜರಿ ಬಸ್ವೊಂದು ನಡು ರಸ್ತೆಯಲ್ಲೇ ಧಗಧಗನೇ ಹೊತ್ತಿ ಉರಿದ ಘಟನೆ ಇಲ್ಲಿನ ಪೊಲೀಸ್ ಠಾಣೆಯ ಘನ್ಪೂರ್ ಬಳಿ ಶುಕ್ರವಾರ ಸಂಭವಿಸಿದೆ.
ಹನ್ಮಕೊಂಡದಿಂದ ಹೈದರಾಬಾದ್ಗೆ ಸೂಪರ್ ಲಗ್ಜರಿ ಬಸ್ನಲ್ಲಿ 30 ಪ್ರಯಾಣಿಕರು ತೆರಳುತ್ತಿದ್ದರು. ಮಧ್ಯಾಹ್ನ ಜನಗಾದ ಸ್ಟೇಷನ್ಘನ್ಪೂರ್ ಬಳಿ ಬರುತ್ತಿದ್ದಂತೆ ಇಂಜಿನ್ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಬಸ್ ನಿಲ್ಲಿಸಿದ ಚಾಲಕ ವೆಂಕಟೇಶ್ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ.
ಪ್ರಯಾಣಿಕರನ್ನು ಕೆಳಗಿಳಿಸುತ್ತಿದ್ದಂತೆ ಬಸ್ ತುಂಬ ಬೆಂಕಿ ಆವರಿಸಿದೆ. ನಡುರಸ್ತೆಯಲ್ಲಿ ಎಲ್ಲರೂ ನೋಡು ನೋಡುತ್ತಿದ್ದಂತೆ ಬಸ್ ಬೆಂಕಿಗಾಹುತಿಯಾಯಿತು. ಸ್ಥಳೀಯ ಗ್ರಾಮ ಪಂಚಾಯ್ತಿ ಸಿಬ್ಬಂದಿ ಟ್ರ್ಯಾಕ್ಟರ್ ಮೂಲಕ ನೀರಿನ ಟ್ಯಾಂಕ್ ತಂದು ಬಸ್ನ ಬೆಂಕಿ ನಂದಿಸಿದರು.
ಇಂಜಿನ್ನಲ್ಲಿ ಶಾಟ್ ಸರ್ಕ್ಯೂಟ್ ಆದ ಕಾರಣ ಈ ಘಟನೆ ನಡೆದಿದೆ ಎಂದು ವರಂಗಲ್ ಅರ್ಬನ್ ಜಿಲ್ಲಾ ಡಿವಿಎಂ ಶ್ರೀನಿವಾಸರಾವು ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಾಯಕರೊಬ್ಬರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.