ಥಾಣೆ(ಮಹಾರಾಷ್ಟ್ರ): ಆಸ್ಪತ್ರೆಗಳಲ್ಲಿ ಅಗ್ನಿ ದುರಂತಗಳು ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿವೆ. ಇಂದು ನಸುಕಿನ ಜಾವ ಸುಮಾರು 3.40ರ ವೇಳೆಗೆ ಥಾಣೆ ಬಳಿಯ ಪ್ರೈಮ್ ಎಂಬ ಖಾಸಗಿ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡು ನಾಲ್ವರು ರೋಗಿಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಬೆಂಕಿಯ ರುದ್ರನರ್ತನಕ್ಕೆ ನಾಲ್ವರು ರೋಗಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದವರನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಶಾಸಕ ಜಿತೇಂದ್ರ ಅವಾದ್ ಹೇಳಿದರು.ಮುಂಬ್ರಾ ಪ್ರದೇಶದ ಕೌಸಾ ಪ್ರದೇಶದಲ್ಲಿರುವ ಈ ಆಸ್ಪತ್ರೆಯಲ್ಲಿ ಸುಮಾರು 17 ಮಂದಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬಂಗಾಳದ ಅಂತಿಮ ಹಂತದ ಚುನಾವಣೆ ಬೆನ್ನಲ್ಲೇ ಅಪಾರ ಪ್ರಮಾಣದ ನಗದು ಜಪ್ತಿ
ಸ್ಥಳಕ್ಕೆ ಮೂರು ಅಗ್ನಿಶಾಮಕದಳ ಮತ್ತು ಐದು ಆ್ಯಂಬುಲೆನ್ಸ್‌ಗಳನ್ನು ಆಗಮಿಸಿದ್ದು, ಬೆಂಕಿಯನ್ನು ನಂದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವಘಡಕ್ಕೆ ಕಾರಣವನ್ನು ಕಂಡುಹಿಡಿಯಲು ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯಲ್ಲಿ ಥಾಣೆ ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಪೊಲೀಸ್ ಮತ್ತು ವೈದ್ಯಕೀಯ ಅಧಿಕಾರಿಗಳಿರಲಿದ್ದಾರೆ.
ಏಪ್ರಿಲ್ 23ರಂದು ಪಾಲ್ಘರ್ ಜಿಲ್ಲೆಯ ವಿರಾರ್ನಲ್ಲಿರುವ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ 15 ಕೋವಿಡ್ ರೋಗಿಗಳು ಸಾವನ್ನಪ್ಪಿದ್ದರು. ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಘೋಷಿಸಿದ್ದಾರೆ.