ಗುವಾಹಟಿ(ಅಸ್ಸೋಂ): ಮದರಸಾಗಳಲ್ಲಿ ಜಿಹಾದಿ ಬೆಳೆಸಲಾಗುತ್ತಿದೆ ಎಂಬುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ. ಅಸ್ಸೋಂನ ಕ್ಯಾಚಾರ್ ಜಿಲ್ಲೆಯ ಖಾಸಗಿ ಮದರಸಾವೊಂದರಲ್ಲಿ ಜಿಹಾದಿ ಸಿದ್ಧಾಂತವನ್ನು ಬೋಧಿಸಲಾಗುತ್ತದೆ ಎಂಬ ಆಪಾದನೆ ಮೇರೆಗೆ ಪ್ರಕರಣ ದಾಖಲಿಸಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಮದರಸಾದಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಯ ಮೇಲೆ ಅಲ್ಲಿನ ಶಿಕ್ಷಕರು ಹಲ್ಲೆ ಮಾಡಿದ್ದಾರೆ. ಎದೆ, ಕಾಲಿಗೆ ಗಾಯವಾಗಿದ್ದನ್ನು ಕಂಡು ಪೋಷಕರು ಪ್ರಶ್ನಿಸಿದಾಗ ನಡೆದ ಘಟನೆಯನ್ನು ಬಾಲಕ ಉಸುರಿದ್ದಾನೆ. ಇದಾದ ಬಳಿಕ ಮದರಸಾದಲ್ಲಿ ಏನೆಲ್ಲಾ ಕಲಿಸಲಾಗುತ್ತದೆ ಎಂಬ ಬಗ್ಗೆ ಹೇಳಿದ್ದಾನೆ.
ಸಂವಿಧಾನ ವಿರೋಧಿ ಶಿಕ್ಷಣ: ಖಾಸಗಿ ಮದರಸಾದಲ್ಲಿ ಸಂವಿಧಾನ ಮತ್ತು ಜನಾಂಗೀಯ ವಿರೋಧಿ ಚಟುವಟಿಕೆಗಳನ್ನು ಪ್ರಚೋಧಿಸಲಾಗುತ್ತಿದೆ. ವಿಶೇಷ ತರಗತಿಗಳ ಹೆಸರಿನಲ್ಲಿ ರಾತ್ರಿ ವೇಳೆಯೂ ಮಕ್ಕಳಿಗೆ ಜಿಹಾದ್ ಬಗ್ಗೆ ಹೇಳಿಕೊಡಲಾಗುತ್ತಿತ್ತು. ಇದನ್ನು ಪ್ರಶ್ನಿಸಿದ ನನ್ನ ಮಗನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹಲ್ಲೆಗೊಳಗಾದ ವಿದ್ಯಾರ್ಥಿಯ ತಂದೆ ಸಹಾಬುದ್ದೀನ್ ಖಾನ್ ಆರೋಪಿಸಿದ್ದಾರೆ.
ವಿದ್ಯಾರ್ಥಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಮದರಸಾದ ಮೇಲೆ ಎಫ್ಐಆರ್ ದಾಖಲಿಸಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಅಲ್ಲದೇ ತಮಗೆ ಕೊಲೆ ಬೆದರಿಕೆ ಇದೆ. ಭದ್ರತೆ ನೀಡಬೇಕು ಎಂದು ಕೋರಿದ್ದಾರೆ.