ಕೊಲ್ಕತ್ತಾ: ದೇಶದಲ್ಲಿ ಕೋವಿಡ್ ಪ್ರಕರಣ ಗರಿಷ್ಠ ಮಟ್ಟಕ್ಕೆ ತಲುಪಿರುವ ನಡುವೆಯೇ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ 8 ನೇ ಹಾಗೂ ಅಂತಿಮ ಹಂತದ ಚುನಾವಣೆ ಇಂದು ನಡೆಯುತ್ತಿದೆ.
35 ಸ್ಥಾನಕ್ಕೆ 283 ಅಭ್ಯರ್ಥಿಗಳ ಪೈಪೋಟಿ
ಮಾಲ್ಡಾ, ಮುರ್ಶಿದಾಬಾದ್, ಬಿರ್ಭುಮ್ ಮತ್ತು ಕೊಲ್ಕತ್ತಾ ಜಿಲ್ಲೆಗಳ 35 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಮಾಲ್ಡಾ ಜಿಲ್ಲೆಯ 6, ಮುರ್ಶಿದಾಬಾದ್ ಮತ್ತು ಬಿರ್ಭುಮ್ ಜಿಲ್ಲೆಗಳ ತಲಾ 11 ಮತ್ತು ಕೊಲ್ಕತ್ತಾದ 7 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಒಟ್ಟು 11,860 ಕೇಂದ್ರಗಳಲ್ಲಿ ಮತದಾನ ನಡೆಯುತ್ತಿದ್ದು, 35 ಮಹಿಳೆಯರು ಸೇರಿದಂತೆ 283 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಇಬ್ಬರು ಸಚಿವರಿಗೆ ಅದೃಷ್ಟ ಪರೀಕ್ಷೆ
ಇಂದು ನಡೆಯುತ್ತಿರುವ ಚುನಾವಣೆಯಲ್ಲಿ ಇಬ್ಬರು ಸಚಿವರಾದ ಶಶಿ ಪಾಂಜಿ ಮತ್ತು ಸದನ್ ಪಾಂಡೆ ಅಗ್ನಿ ಪರೀಕ್ಷೆಗಿಳಿದಿದ್ದಾರೆ. ಚುನಾವಣಾ ಹಿಂಸೆಯ ಇತಿಹಾಸ ಹೊಂದಿರುವ ಬಿರ್ಭುಮ್ ಜಿಲ್ಲೆಯತ್ತ ಎಲ್ಲರ ಚಿತ್ತ ನೆಟ್ಟಿದೆ.
ಚು.ಆಯೋಗ ಸೂಚನೆ
ದೇಶದಲ್ಲಿ ಕೋವಿಡ್ ಪರಿಸ್ಥಿತಿ ಗಂಭೀರವಾಗಿರುವುದರಿಂದ ಕಟ್ಟುನಿಟ್ಟಾಗಿ ಮಾರ್ಗಸೂಚಿ ಪಾಲಿಸಲು ಚುನಾವಣಾ ಆಯೋಗ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ. ವಿಶೇಷವಾಗಿ ಇಂದು ಚುನಾವಣೆ ಎದುರಿಸಬೇಕಿದ್ದ ಮಾಲ್ಡಾ ಜಿಲ್ಲೆಯ ಬೈಸಾಬ್ ನಗರದ ಪಕ್ಷೇತರ ಅಭ್ಯರ್ಥಿ ಕೆಲ ದಿನಗಳ ಹಿಂದೆ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಅಧಿಕೃತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮೃತಪಟ್ಟರೆ ಮಾತ್ರ ಚುನಾವಣೆ ರದ್ದುಪಡಿಸುವುದಾಗಿ ಹೇಳಿರುವ ಚುನಾವಣಾ ಆಯೋಗ, ನಿಗದಿಯಂತೆ ಬೈಸಾಬ್ ನಗರದಲ್ಲಿ ಚುನಾವಣೆ ನಡೆಸುತ್ತಿದೆ.
ಚುನಾವಣಾ ಆಯೋಗದ ವಿರುದ್ಧವೇ ಕೊಲೆ ಕೇಸ್!
ಇಂಗ್ಲಿಷ್ ಬಝಾರ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಶ್ರೀರೂಪ ಮಿತ್ರಾ ಚೌಧರಿ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕೋವಿಡ್‌ನಿಂದ ನಿಧನರಾದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಕಾಜಲ್ ಸಿನ್ಹಾ ಅವರ ಪತ್ನಿ ನಂದಿತಾ ಸಿನ್ಹಾ ಅವರು ಚುನಾವಣಾ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಉಲ್ಬಣ
ಚುನಾವಣಾ ಕಾವಿನ ನಡುವೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಉಲ್ಬಣಗೊಳ್ಳುತ್ತಿವೆ. ರಾಜ್ಯದಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ 17,207 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 77 ಸೋಂಕಿತರು ಮೃತಪಟ್ಟಿದ್ದಾರೆ. 3,821 ಪ್ರಕರಣಗಳು ಕೋಲ್ಕತ್ತಾ ನಗರದಲ್ಲಿ ವರದಿಯಾಗಿವೆ.