ಉಜ್ಜೈನಿ: ಮಧ್ಯಪ್ರದೇಶದ ಉಜ್ಜೈನಿಯಲ್ಲಿರುವ ಬಾಬಾ ಮಹಾಕಾಲ್ನ ದರ್ಶನಕ್ಕೆ ಹೋಗ್ತಿದ್ದ ವೇಳೆ ಬಾಲಿವುಡ್ ನಟಿ ತನುಶ್ರೀ ದತ್ತಾ ಅವರ ಕಾರು ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ನಟಿ ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಗೊಂಡಿರುವ ಕೆಲವೊಂದು ಫೋಟೋ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಮಹಾಕಾಲ್ ದೇವಸ್ಥಾನ ತಲುಪುವುದಕ್ಕೂ ಸ್ವಲ್ಪ ಸಮಯ ಮುಂಚಿತವಾಗಿ ಈ ಘಟನೆ ನಡೆದಿದ್ದು, ಕಾರಿನ ಬ್ರೇಕ್ ಫೇಲ್ ಆಗಿ ಕಾರು ಅಪಘಾತಕ್ಕೀಡಾಗಿದೆ. ಮಹಾಕಾಲ್ ದೇವರ ಕೃಪೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಿಕೊಂಡಿರುವ ನಟಿ, ಇದೀಗ ಚೇತರಿಸಿಕೊಂಡಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ಹಿಂದಿ ರಾಷ್ಟ್ರ ಭಾಷೆಯಲ್ಲ, ಅತಿ ಹೆಚ್ಚು ಮಾತನಾಡ್ತಾರೆ ಅಷ್ಟೆ: ಗಾಯಕ ಸೋನು ನಿಗಮ್
ವಿಶ್ವವಿಖ್ಯಾತ ಜ್ಯೋತಿರ್ಲಿಂಗ ಬಾಬಾ ಮಹಾಕಾಲ್ ದರ್ಶನ ಪಡೆದುಕೊಳ್ಳಲು ನಟಿ ತನುಶ್ರೀ ದತ್ತಾ ಸೋಮವಾರ ಉಜ್ಜೈನಿಗೆ ಆಗಮಿಸಿದ್ದರು. ಇದಕ್ಕೂ ಮುಂಚಿತವಾಗಿ ಅಪಘಾತ ಸಂಭವಿಸಿದೆ. ಹೀಗಾಗಿ ಕಾಲಿನ ಭಾಗಕ್ಕೆ ಸ್ವಲ್ಪ ಪ್ರಮಾಣದ ನೋವಾಗಿದೆ. ಇದರ ಮಧ್ಯೆ ಕೂಡ ನಟಿ ದೇವರ ದರ್ಶನ ಪಡೆದುಕೊಂಡಿದ್ದಾರೆ. ನಟಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದು, ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದ್ದಾರೆ.
