ನಾಗಾಂವ್(ಅಸ್ಸೋಂ): ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಆನೆಗಳು ಕಾದಾಡಿರುವ ಘಟನೆ ಅಸ್ಸೋಂನ ನಾಗಾಂವ್ ಜಿಲ್ಲೆಯ ಕಂಪುರ್ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಗ್ರಾಮಸ್ಥರು ಎರಡು ಆನೆಗಳ ನಡುವಿನ ಭೀಕರ ಕಾಳಗಕ್ಕೆ ಸಾಕ್ಷಿಯಾಗಿದ್ದಾರೆ. ಅಲ್ಲದೇ ಆನೆಗಳ ಘರ್ಷಣೆಯಿಂದ ಸ್ಥಳೀಯರು ಭಯಭೀತರಾಗಿದ್ದಾರೆ.
ಅಸ್ಸೋಂನ ಹಲವೆಡೆ ಮನುಷ್ಯ ಮತ್ತು ಆನೆಗಳ ನಡುವಿನ ಸಂಘರ್ಷ ಮುಂದುವರೆದಿದೆ. ಅಸ್ಸೋಂನ ನಾಗಾಂವ್ ಜಿಲ್ಲೆಯ ಕಂಪುರ್ ಪ್ರದೇಶದ ಜನರು ದೀರ್ಘಕಾಲದಿಂದ ಆನೆಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಈ ಭಾಗದ ಬಾಮುನಿ ಮತ್ತು ಕಂದಲಿ ಬೆಟ್ಟಗಳಿಂದ ಕಾಡಾನೆಗಳು ಆಹಾರ ಅರಸಿ ಗದ್ದೆಗಳಿಗೆ ಬರುತ್ತಿವೆ. ಆನೆಗಳ ದೊಡ್ಡ ಹಿಂಡೊಂದು ರೈಲು ಮಾರ್ಗವನ್ನು ದಾಟಿ ಕಂಪುರ್ ಪಟಿಯಾಪಮ್ ಮೀಸಲು ಪ್ರದೇಶದಲ್ಲಿ ನೆಲೆಸಿದೆ.
ಕೆಲವು ವರ್ಷಗಳ ಹಿಂದೆ ಪಟಿಯಾಪಮ್‌ನಲ್ಲಿ ರೈಲು ಮಾರ್ಗವನ್ನು ದಾಟುತ್ತಿದ್ದಾಗ ಹೈಸ್ಪೀಡ್ ರೈಲಿಗೆ ಡಿಕ್ಕಿ ಹೊಡೆದು ಗರ್ಭಿಣಿ ಆನೆ ಸೇರಿದಂತೆ ಮೂರು ಕಾಡಾನೆಗಳು ಮೃತಪಟ್ಟಿದ್ದವು. ರಾತ್ರಿ ವೇಳೆ ಹಲವು ಆನೆಗಳು ರೈಲು ಹಳಿ ದಾಟುತ್ತಿದ್ದರೂ ರೈಲ್ವೆ ಇಲಾಖೆ ಈ ಬಗ್ಗೆ ಗಮನಹರಿಸುತ್ತಿಲ್ಲ ಎಂಬ ಆರೋಪಗಳಿವೆ. ಆನೆಗಳು ಈಗ ಪಟಿಯಾಪಮ್, ಚಾಂಗ್ಜುರೈ, ಟೆಟೆಲಿಸಾರಾ, ತೆಲಿಯಾತಿ ಮತ್ತು ಇತರ ಸ್ಥಳಗಳಲ್ಲಿ ಸಂಚರಿಸುತ್ತಿವೆ.
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆ ಸಂಚಾರದ ವಿಡಿಯೋ ವೈರಲ್!