ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಯುದ್ಧದ ನಡುವೆ ಉಕ್ರೇನ್‌ನಲ್ಲಿ ಸಿಲುಕಿರುವ ಜನರು ಮತ್ತು ಭಾರತೀಯ ವಿದ್ಯಾರ್ಥಿಗಳನ್ನು ನೋಡಿದರೆ ಬೇಸರ ಎನಿಸುತ್ತದೆ. ಆದರೆ ಯುದ್ಧವನ್ನು ನಿಲ್ಲಿಸುವಂತೆ ರಷ್ಯಾ ಅಧ್ಯಕ್ಷರಿಗೆ ನಾವು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ವಕೀಲರಿಗೆ ಹೇಳಿದೆ.
ಉಕ್ರೇನ್‌ನಲ್ಲಿ ಸಿಲುಕಿದ ಭಾರತೀಯರನ್ನು ಸ್ಥಳಾಂತರಿಸುವ ಕುರಿತು ವಕೀಲರಿಂದ ಸಲ್ಲಿಕೆಯಾದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ನ್ಯಾಯಪೀಠ ನಡೆಸಿದೆ. ಅಲ್ಲಿ ಸಿಲುಕಿರುವವರನ್ನು ನೋಡಿದರೆ ಪಾಪ ಎಂದೆನಿಸತ್ತದೆ. ಆದರೆ ಕೋರ್ಟ್ ಏನು ಮಾಡಲು ಸಾಧ್ಯ? ಯುದ್ಧವನ್ನು ನಿಲ್ಲಿಸಲು ನಾವು ರಷ್ಯಾ ಅಧ್ಯಕ್ಷರಿಗೆ ನಿರ್ದೇಶನ ನೀಡಬಹುದೇ? ಎಂದು ಕೇಳಿದೆ.
ಇದನ್ನೂ ಓದಿ: ಉಕ್ರೇನ್ನಿಂದ 11 ಕನ್ನಡಿಗರ ರಕ್ಷಣೆ.. ಇಂದು ಮಧ್ಯಾಹ್ನವೇ ಬೆಂಗಳೂರಿಗೆ ಆಗಮನ
ಅಲ್ಲಿರುವ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಬೇಕೆಂಬ ವಕೀಲರ ಮನವಿಗೆ ಉತ್ತರಿಸಿದ ಪೀಠವು, ಯಾವ ಸರ್ಕಾರವು ಕಾಳಜಿ ವಹಿಸುತ್ತದೆ? ಎಂದು ಕೇಳಿತು. ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳ ಬಗ್ಗೆ ನ್ಯಾಯಾಲಯಕ್ಕೆ ಎಲ್ಲಾ ಸಹಾನುಭೂತಿ ಇದೆ ಮತ್ತು ಭಾರತ ಸರ್ಕಾರ ತನ್ನ ಕೆಲಸವನ್ನು ಮಾಡುತ್ತಿದೆ. ಈ ವಿಷಯದಲ್ಲಿ ಅಟಾರ್ನಿ ಜನರಲ್ ಅವರ ಅಭಿಪ್ರಾಯವನ್ನು ಪಡೆಯುವುದಾಗಿ ಪೀಠವು ತಿಳಿಸಿದೆ.