ನವದೆಹಲಿ: ಕರ್ನಾಟಕ ಸೇರಿದಂತೆ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದ ಬಿಟ್‌ಕಾಯಿನ್ ಪ್ರಕರಣದ ಕುರಿತು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ತಂಡ ಭಾರತದಲ್ಲಿ ತನಿಖೆ ನಡೆಸುತ್ತಿಲ್ಲ ಎಂದು ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಸ್ಪಷ್ಟಪಡಿಸಿದೆ. ಅಮೆರಿಕದ ಗುಪ್ತಚರ ಸಂಸ್ಥೆಯಾದ ಎಫ್‌ಬಿಐ ತಂಡವು ಭಾರತಕ್ಕೆ ಬಂದಿದ್ದು, ಬಿಟ್‌ಕಾಯಿನ್ ಪ್ರಕರಣದ ತನಿಖೆಗಾಗಿ ಕರ್ನಾಟಕ ಪೊಲೀಸ್ ಮತ್ತು ಸಿಬಿಐನೊಂದಿಗೆ ಸಂಪರ್ಕದಲ್ಲಿದೆ ಎಂಬ ವದಂತಿಗಳು ಹರಿದಾಡಿದ್ದವು.
ಬಿಟ್‌ಕಾಯಿನ್ ಕುರಿತು ಯಾವುದೇ ಅಂತರರಾಷ್ಟ್ರೀಯ ತಜ್ಞರು ಭಾರತದಲ್ಲಿ ತನಿಖೆ ನಡೆಸುತ್ತಿಲ್ಲ. ಈ ಬಗ್ಗೆ ಸಿಬಿಐ ವಿನಂತಿಸಿಕೊಂಡಿಲ್ಲ. ದೇಶದಲ್ಲಿ ಬಿಟ್‌ಕಾಯಿನ್ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಎಂಬುದು ಕೇವಲ ವದಂತಿ. ದೇಶದೊಳಗಿನ ಪ್ರಕರಣವನ್ನು ಸಕ್ಷಮ ಪ್ರಾಧಿಕಾರದಿಂದ ಇನ್ನೊಂದು ತನಿಖಾ ತಂಡಕ್ಕೆ ಅನುಮತಿ ನೀಡುವ ಪ್ರಶ್ನೆಯೇ ಉದ್ಭವಿಸದು ಎಂದು ಸಿಬಿಐ ಸ್ಪಷ್ಟಪಡಿಸಿದೆ.
ರಹಸ್ಯ ಕಾರ್ಯಾಚರಣೆ ನಡೆಸುವ ಇಂಟರ್ಪೋಲ್ ಸಂಸ್ಥೆಗೆ ಭಾರತದ ಸಿಬಿಐ, ಅಮೆರಿಕದ ಎಫ್‌ಬಿಐ ಸೇರಿದಂತೆ ಅಂತರರಾಷ್ಟ್ರೀಯ ಕಾನೂನು ಜಾರಿ ಸಂಸ್ಥೆಗಳು ನಿಕಟ ಸಂಪರ್ಕದಲ್ಲಿರುತ್ತವೆ. ಹೀಗಾಗಿ ದೇಶದಲ್ಲಿ ಬಿಟ್‌ಕಾಯಿನ್ ಬಗ್ಗೆ ತನಿಖೆ ನಡೆಸಲು ಎಫ್‌ಬಿಐ ತಂಡ ಬಂದಿಳಿದಿದೆ ಎಂಬ ಸುದ್ದಿಯಾಗಿತ್ತು. ಕರ್ನಾಟಕದಲ್ಲಿ ಬಿಟ್‌ಕಾಯಿನ್ ಹಗರಣವು ರಾಜಕಾರಣಿಗಳು ಮತ್ತು ಪೊಲೀಸ್ ಅಧಿಕಾರಿಗಳ ಜೊತೆ ತಳುಕು ಹಾಕಿಕೊಂಡಿತ್ತು. ಅಂತರರಾಷ್ಟ್ರೀಯ ಹ್ಯಾಕರ್‌ಗಳಿಂದ ಬಿಟ್‌ಕಾಯಿನ್‌ಗಳ ರೂಪದಲ್ಲಿ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿತ್ತು. ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಶ್ರೀಕೃಷ್ಣ ಆಲಿಯಾಸ್ ಶ್ರೀಕಿಯನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ಗುಜರಾತ್‌ನ ನಡಬೆಟ್‌ನಲ್ಲಿ ಇಂಡೋ-ಪಾಕ್ ಗಡಿ ವೀಕ್ಷಣಾ ಕೇಂದ್ರದ ಉದ್ಘಾಟನೆ : ಇದರ ವಿಶೇಷತೆ ಇಂತಿದೆ