ಕಾಮರೆಡ್ಡಿ(ತೆಲಂಗಾಣ): ಕಾಮರೆಡ್ಡಿ ಜಿಲ್ಲೆಯ ಗ್ರಾಮವೊಂದರಲ್ಲಿ 14 ವರ್ಷದ ಇಬ್ಬರು ಅವಳಿ ಸಹೋದರಿಯರನ್ನು ಅವರ ತಂದೆ ಹಾಗೂ ಮಲತಾಯಿ ಮಾರಾಟ ಮಾಡಿರುವ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದಂಪತಿ ಹಾಗೂ ಐವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎಸ್‌ಪಿ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
ಏನಿದು ಪ್ರಕರಣ: ಕಾಮರೆಡ್ಡಿ ಜಿಲ್ಲೆಯ ಮಚರೆಡ್ಡಿ ಮಂಡಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅವಳಿ ಸಹೋದರಿಯರು ಎರಡು ವರ್ಷದವರಿದ್ದಾಗಲೇ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಅವರ ತಂದೆ ಎರಡನೇ ವಿವಾಹವಾಗಿದ್ದು, ಎರಡನೇ ಹೆಂಡತಿಗೆ ಒಬ್ಬ ಮಗ ಮತ್ತು ಒಬ್ಬಳು ಮಗಳಿದ್ದಾಳೆ. ಹಣಕಾಸಿನ ಮುಗ್ಗಟ್ಟಿನಿಂದ ಆರೋಪಿ ತಂದೆ ನಾಲ್ಕು ಮಕ್ಕಳನ್ನು ಸಾಕುವುದು ಕಷ್ಟ ಎಂದು ಭಾವಿಸಿ ಹೆಣ್ಣು ಮಕ್ಕಳನ್ನು ಮಾರಾಟ ಮಾಡಲು ಮುಂದಾಗಿದ್ದರು ಎಂದು ಎಸ್ಪಿ ರೆಡ್ಡಿ ಹೇಳಿದರು.
ಈ ರೀತ ತನಗೆ ನಾಲ್ಕು ಮಕ್ಕಳನ್ನು ಸಾಕುವುದು ಕಷ್ಟವಾಗಿದೆ. ನಾಲ್ವರಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಮಾರುತ್ತೇನೆ ಎಂದು ತನ್ನ ಯೋಜನೆಯನ್ನು ತನಗೆ ತಿಳಿದಿರುವ ಒಬ್ಬ ಸಂಬಂಧಿಗೆ ತಿಳಿಸಿದ್ದಾನೆ. ಸಂಬಂಧಿ ಹೆಣ್ಣು ಮಕ್ಕಳ ತಂದೆಯನ್ನು ರಾಜಸ್ಥಾನದ ಒಬ್ಬ ವ್ಯಕ್ತಿಗೆ ಪರಿಚಯಿಸಿದ್ದಾನೆ. ಆರೋಪಿ ತಂದೆ ಮೇದಕ್ ಜಿಲ್ಲೆಯ ಮನೋಹರಾಬಾದ್ ಮಂಡಲದ ದಂಡುಪಲ್ಲಿಯ ಶರ್ಮನ್ ಎಂಬವನಿಗೆ ಒಬ್ಬ ಹೆಣ್ಣು ಮಗಳನ್ನು 80,000 ರೂ.ಗೆ ಮಾರಾಟ ಮಾಡಿದ್ದಾನೆ. 2ನೇ ಮಗಳನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಿಕಂದರಾಬಾದ್‌ನ ಬೋಯಿನಪಲ್ಲಿಯ ಕೃಷ್ಣಕುಮಾರ್ ಎಂಬುವವರಿಗೆ 50,000 ರೂ.ಗೆ ಮಾರಾಟ ಮಾಡಲಾಗಿತ್ತು ಎಂದು ಎಸ್ಪಿ ತಿಳಿಸಿದರು.
ಆರೋಪಿ ತಂದೆ ಒಬ್ಬ ಹೆಣ್ಣು ಮಗಳನ್ನು ಮಾರಾಟ ಮಾಡಿದ ನಂತರ ಆರೋಪಿ ಶರ್ಮನ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಾಲಕಿಯನ್ನು ಹೈದರಾಬಾದ್‌ಗೆ ಕರೆದೊಯ್ದು ಬಲವಂತವಾಗಿ ಮದುವೆಯಾಗಿದ್ದನು. ಆರೋಪಿ ಶರ್ಮನ್ ಬಾಲಕಿಯನ್ನು ತನ್ನ ಸ್ವಂತ ಗ್ರಾಮವಾದ ದಂಡುಪಲ್ಲಿಗೆ ಕರೆದೊಯ್ದು ದೈಹಿಕವಾಗಿ ಚಿತ್ರಹಿಂಸೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶರ್ಮನ್ಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಮತ್ತು ಈತ ಅನೇಕ ವಿವಾಹೇತರ ಸಂಬಂಧಗಳನ್ನೂ ಹೊಂದಿದ್ದಾನೆ. ವ್ಯಕ್ತಿಯ ಚಿತ್ರಹಿಂಸೆಯಿಂದ ಬೇಸತ್ತ ಬಾಲಕಿ ಆತನ ಹಿಡಿತದಿಂದ ಓಡಿಹೋಗಿ ಕಾಮರೆಡ್ಡಿಯನ್ನು ತಲುಪಿ ಅಲ್ಲಿ ಮಕ್ಕಳ ರಕ್ಷಣಾಧಿಕಾರಿ (ಡಿಸಿಪಿಒ) ಶ್ರವಂತಿ ಅವರನ್ನು ಭೇಟಿಯಾಗಿದ್ದಳು. ತನ್ನ ಸ್ವಂತ ಪೋಷಕರು ತನ್ನನ್ನು ಮತ್ತು ಅವಳ ಅವಳಿ ಸಹೋದರಿಯನ್ನು ಹೇಗೆ ಮಾರಾಟ ಮಾಡಿದ್ದಾರೆ ಎಂಬುದನ್ನು ಅಧಿಕಾರಿಗೆ ವಿವರಿಸಿದ್ದಳು ಎಂದು ಎಸ್ಪಿ ಹೇಳಿದರು.
ಬಾಲಕಿ ನೀಡಿದ ಮಾಹಿತಿ ಆಧಾರದ ಮೇಲೆ ಡಿಸಿಪಿಒ ಪೊಲೀಸರಿಗೆ ದೂರು ನೀಡಿದ್ದು, ಬಾಲಕಿಯ ತಂದೆ, ಮಲತಾಯಿ, ಶರ್ಮನ್ ಮತ್ತು ಕೃಷ್ಣಕುಮಾರ್ ಮತ್ತು ಹೆಣ್ಣುಮಕ್ಕಳನ್ನು ಮಾರಾಟ ಮಾಡಲು ಮಧ್ಯವರ್ತಿಗಳಾಗಿದ್ದ ಕಲಾ ರಂಬಟಿ, ರಮೇಶ್ ಮತ್ತು ಮಹೇಂದರ್ ವಿರುದ್ಧ ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದು, ಮುಂದಿನ ತನಿಖೆ ಮುಂದುವರಿದಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಇದನ್ನೂ ಓದಿ: ಮಾವನಿಂದ ಅತ್ಯಾಚಾರ, ಮೂರು ಬಾರಿ ಗರ್ಭಪಾತ.. ಮದುವೆ ಮುನ್ನವೇ ಬಾಲಕಿ ಕೈಗೆ ಮಗು ಕೊಟ್ಟ ನಿಶ್ಚಿತ ವರ