ತಿರುವನಂತಪುರಂ : 19 ವರ್ಷದ ಯುವಕನನ್ನು ಗೆಳತಿಯ ತಂದೆ ಚಾಕುವಿನಿಂದ ಇರಿದು ಕೊಂದಿರುವ ಘಟನೆ ತಿರುವನಂತಪುರಂನ ಪೆಟ್ಟಾದಲ್ಲಿ ಬುಧವಾರ ಮುಂಜಾನೆ ನಡೆದಿದೆ.
ಪೆಟ್ಟಾ ಮೂಲದ ಲಾಲನ್ (51) ಎಂಬಾತ ಬಾಲಕಿಯ ಕೋಣೆಯೊಳಗಿದ್ದ ಬಾಲಕನನ್ನು ಕಳ್ಳನೆಂದು ಭಾವಿಸಿ ಚಾಕುವಿನಿಂದ ಇರಿದಿರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಬುಧವಾರ ಮುಂಜಾನೆ 3 ಗಂಟೆಗೆ ಈ ಘಟನೆ ನಡೆದಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಡಿ. ಕೆ ಪೃಥ್ವಿರಾಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಲಾಲನ್ ತನ್ನ ಮಗಳ ಕೋಣೆಯೊಳಗೆ ಏನೋ ಶಬ್ದವನ್ನು ಕೇಳಿದ್ದಾನೆ ಮತ್ತು ನಂತರ ಬಾಗಿಲು ತಟ್ಟಿ ಅದನ್ನು ತೆರೆಯಲು ಹೇಳಿದ್ದಾನೆ. ಆಗ ಅವಳು ಬಾಗಿಲು ತೆರೆಯಲು ನಿರಾಕರಿಸಿದಾಗ, ಲಾಲನ್ ಬಾಗಿಲು ಮುರಿದು ಹುಡುಗನೊಂದಿಗೆ ಜಗಳವಾಡಿದ್ದಾನೆ. ಬಳಿಕ ಬಾಲಕನನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.
ನಂತರ ಲಾಲನ್ ಪೊಲೀಸ್ ಠಾಣೆಗೆ ತೆರಳಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಚಾಕಾ ನಿವಾಸಿ ಅನೀಶ್ ಜಾರ್ಜ್ ಎಂಬ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ತೆರಳಿ ಬಾಲಕನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವ ಮುನ್ನವೇ ಆತ ಮೃತಪಟ್ಟಿದ್ದಾನೆ.
ಬಾಲಕ ಲಾಲನ್ ಮನೆಗೆ ರಾತ್ರಿ ವೇಳೆ ಬಾಲಕಿಯನ್ನು ಭೇಟಿಯಾಗಲು ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಲಲನ್ ಹೇಳಿಕೆಯನ್ನು ಪೊಲೀಸರು ಸಂಪೂರ್ಣವಾಗಿ ನಂಬಿಲ್ಲ ಮತ್ತು ಆರೋಪಿಯು ಬಾಲಕನೊಂದಿಗೆ ಯಾವುದಾದರು ದ್ವೇಷವನ್ನು ಹೊಂದಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ತನಿಖೆ ನಡೆಸುವುದಾಗಿ ಸಹಾಯಕ ಪೊಲೀಸ್ ಕಮಿಷನರ್ ಡಿ. ಕೆ ಪೃಥ್ವಿರಾಜ್ ಹೇಳಿದ್ದಾರೆ.
ಓದಿ: ತುಮಕೂರು ಮಹಿಳೆ ಅತ್ಯಾಚಾರ, ಕೊಲೆ.. 26 ವರ್ಷಗಳ ಬಳಿಕ ಅಪರಾಧಿಗೆ ಜೀವಾವಧಿ ಶಿಕ್ಷೆ..