ಲಕ್ನೋ: ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿ, ಓರ್ವ ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಉತ್ತರ ಪ್ರದೇಶದ ಇಟವಾ ಜಿಲ್ಲೆಯ ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಇಲ್ಲಿನ ಬುದಲಿಯ ಗ್ರಾಮದ ಸಮೀಪ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಟ್ರಕ್ವೊಂದು ನಿಯಂತ್ರಣ ಕಳೆದುಕೊಂಡು ಮೋಟಾರ್ ಸೈಕಲ್ ಮೇಲೆ ಹರಿದ ಪರಿಣಾಮ ಈ ದುರ್ಘಟನೆ ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ, ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ತಪ್ಪಾದ ಮಾರ್ಗದಲ್ಲಿ ಸಂಚರಿಸಿದ್ದು, ಬೈಕ್ಗೆ ಡಿಕ್ಕಿ ಹೊಡೆದಿದೆ. ಮೋಟಾರ್ ಸೈಕಲ್ನಲ್ಲಿ ಮಗು ಮತ್ತು ಮಹಿಳೆ ಸೇರಿ ನಾಲ್ವರು ಪ್ರಯಾಣ ಬೆಳೆಸಿದ್ದರು. ಟ್ರಕ್ ನಿಲ್ಲುವ ಮೊದಲೇ ಬೈಕ್ ಪ್ರಯಾಣಿಕರು ಟ್ರಕ್ನ ಚಕ್ರಕ್ಕೆ ಸಿಲುಕಿದ್ದಾರೆ. ಈ ವೇಳೆ ಟ್ರಕ್ ಚಾಲಕ ಸಹ ಗಾಯಗೊಂಡಿದ್ದು, ಆತ ಪರಾರಿಯಾಗಿದ್ದಾನೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ತಕ್ಷಣಕ್ಕೆ ಗಾಯಾಳುಗಳನ್ನು ಡಾ ಭೀಮ್ರಾಂ ಅಂಬೇಡ್ಕರ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಆಸ್ಪತ್ರೆಗೆ ಸಾಗುವ ಮಧ್ಯೆ ಮೂವರು ಪ್ರಯಾಣಿಕರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮತ್ತೊಬ್ಬ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಮಾಹಿತಿ ನೀಡಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಮಾತನಾಡಿದ ಇಟುವಾ ಸರ್ಕಲ್ ಅಧಿಕಾರಿ ಅಮಿತ್ ಕುಮಾರ್ ಸಿಂಗ್, ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ತಂದೆ, ತಾಯಿ ಮತ್ತು ಮಗು ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಔರಾಲಿಯಾ ಜಿಲ್ಲೆಯ ನಿವಾಸಿಗಳು ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಅವರ ಕುಟುಂಬವನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ ಎಂದರು.
ಮುಂಬೈ- ಅಹಮದಾಬಾದ್ ಹೆದ್ದಾರಿ ಅಪಘಾತದಲ್ಲಿ ಇಬ್ಬರ ಸಾವು.. ಮುಂಬೈ ಮತ್ತು ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಗುರುವಾರ ಬೆಳಗ್ಗೆ ಈ ಘಟನೆ ನಡೆದಿತ್ತು. ಇಲ್ಲಿನ ಸಕ್ವಾರ್ ಜಿಲ್ಲೆಯ ಸಮೀಪ ಅತಿ ವೇಗದಿಂದ ನಿಯಂತ್ರಣ ಕಳೆದುಕೊಂಡ ಕಾರಿನ ಡ್ರೈವರ್ ಡಿವೈಡರ್ಗೆ ಗುದ್ದಿದ್ದಾನೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಗಾಯಗೊಂಡವರನ್ನು ಮೀರಾ ರಸ್ತೆಯ ವಕರ್ಡ್ ಆಸ್ಪತ್ರೆಗೆ ದಾಖಲಿಸಿದ್ದರು.
ಅಶೋಕ್ ಮುಸಲೆ, ರಮೇಶ್ ಮುಸಲೆ, ಮತ್ತು ರುಚಿಕ ದೇಸಾಯಿ ಎಂಬುವವರು ಈ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಿದ್ದರು. ಇವರೆಲ್ಲಾ ಮುಂಬೈನ ಪ್ರಭದೇವಿ ಇವಾಸಿಗಳಾಗಿದ್ದು, ಪಲ್ಗಾರ್ಗೆ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಅಶೋಕ್ ಮುಸಲೆ ಮತ್ತು ಮಾಧುರಿ ಮುಸಲೆ ಸಾವನ್ನಪ್ಪಿದ್ದಾರೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಮೃತರ ಅಂತ್ಯಕ್ರಿಯೆ ಸಂಬಂಧ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿತ್ತು.
ಗುಜರಾತ್ನಲ್ಲಿ ಇಬ್ಬರು ಸಾವು.. ಗುಜರಾತ್ನ ವಸದ್ ಸಮೀಪದ ರಾಮ್ನಗರ್ ಸ್ಟ್ರೇಚ್ ಬಳಿಯ ಅಹಮದಾಬಾದ್- ವಡೋದರ ಎಕ್ಸ್ಪ್ರೆಸ್ವೇನಲ್ಲಿ ನಡೆದ ಅಪಘಾತದಲ್ಲಿ ಟ್ರಕ್ ಡ್ರೈವರ್ ಮತ್ತು ಕ್ಲಿನರ್ ಸಾವನ್ನಪ್ಪಿರುವ ಘಟನೆ ನಡೆದಿದೆ. ಎಕ್ಸ್ಪ್ರೆಸ್ವೇ ಬಳಿ ಟೈರ್ ರಿಪೇರಿ ಮಾಡಿ ಇನ್ನೇನು ಟ್ರಕ್ ಮುಂದೆ ಸಾಗಬೇಕು ಎನ್ನುವಾಗ ವ್ಯಾನ್ಗೆ ಹಿಂದಿನಿಂದ ಗುದ್ದಿದ ಪರಿಣಾಮ ಈ ಅನಾಹುತ ಸಂಭವಿಸಿದೆ.
ಇದನ್ನೂ ಓದಿ: 500 ರೂಪಾಯಿಗೆ ಜಗಳ.. ಹಣಕ್ಕಾಗಿ ಬಿತ್ತು ವ್ಯಕ್ತಿಯ ಹೆಣ