ನವದೆಹಲಿ: ಕೇಂದ್ರ ಹೊಸ ಕೃಷಿ ಕಾನೂನುಗಳನ್ನು ಜಾರಿಗೊಳಿಸಿ ಒಂದು ವರ್ಷವಾದ ಹಿನ್ನೆಲೆ ಜೂನ್ 5 ರಂದು ರೈತರು ಹೊಸ ಕೃಷಿ ಕಾನೂನುಗಳ ಪ್ರತಿಗಳನ್ನು ಸುಡುವುದಾಗಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಘೋಷಿಸಿದ್ದಾರೆ.
ಉತ್ತರ ಪ್ರದೇಶದ ರಾಂಪುರಕ್ಕೆ ಬುಧವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ರೈತರ ಬೇಡಿಕೆಗಳಿಗೆ ಕೇಂದ್ರ ಒಪ್ಪಿಗೆ ನೀಡಬೇಕು, ಇಲ್ಲದಿದ್ದರೆ ಈ ಆಕ್ರೋಶ ಮುಂದುವರಿಯುತ್ತದೆ ಮತ್ತು ಜನರು ಪ್ರತಿಭಟನೆ ಮುಂದುವರಿಸಿದ್ದಾರೆ ಎಂದು ಹೇಳಿದರು.
ಮಳೆಗಾಲ ಹಿನ್ನೆಲೆ ಧರಣಿ ಸ್ಥಳಗಳಲ್ಲಿ ನಿರ್ಮಿಸಲಾದ ತಾತ್ಕಾಲಿಕ ಮನೆಗಳನ್ನು ಕಾಂಕ್ರೀಟ್ ಮನೆಗಳಾಗಿ ಪರಿವರ್ತಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ರೈತರ ಪ್ರತಿಭಟನೆಯು ವೇಗವನ್ನು ಪಡೆಯುತ್ತಿದೆ ಮತ್ತು ಜಗತ್ತಿನ ಎಲ್ಲೆಡೆಯಿಂದ ಬೆಂಬಲ ಪಡೆಯುತ್ತಿದೆ ಎಂದು ಅವರು ಹೇಳಿದರು. ಈ ರೈತ ವಿರೋಧಿ ಕಾನೂನುಗಳನ್ನು ಕೇಂದ್ರ ವಜಾಗೊಳಿಸುವವರೆಗೆ, ನಮ್ಮ ರೈತ ಚಳವಳಿ ಮುಂದುವರಿಯುತ್ತದೆ ಮತ್ತು ರಾಷ್ಟ್ರದಾದ್ಯಂತ ವಿಸ್ತರಿಸುತ್ತದೆ ಎಂದು ರಾಕೇಶ್ ಟಿಕಾಯತ್ ಹೇಳಿದರು.
ಪ್ರಧಾನಿ ಮೋದಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ರಂತೆ ಆಗುತ್ತಿದ್ದಾರೆ:
ದೇಶದಲ್ಲಿನ ಹಣದುಬ್ಬರ, ಆರ್ಥಿಕತೆಗೆ ಸಂಬಂಧಪಟ್ಟಂತೆ ಭಾರತೀಯ ಕಿಸಾನ್ ಯೂನಿಯನ್ (BKU) ರೈತ ಸಂಘಟನೆ ಮುಖ್ಯಸ್ಥ ರಾಕೇಶ್ ಟಿಕಾಯತ್ ಪ್ರಧಾನಿ ಮೋದಿ ವಿರುದ್ಧ ಟ್ವಿಟರ್ನಲ್ಲಿ ವಾಗ್ದಾಳಿ ನಡೆಸಿದ್ದಾರೆ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಉತ್ತರ ಕೊರಿಯನ್ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ರಂತೆ ಆಗುತ್ತಿದ್ದಾರೆ. ಈಗ ರಾಜನ ವಿರುದ್ಧ ಯಾರೂ ಮಾತನಾಡುವಂತಿಲ್ಲ. ಹಾಗೆ ಮಾತನಾಡಿದರೆ ಶಿಕ್ಷೆ ಖಂಡಿತ. ಉತ್ತರ ಕೊರಿಯಾದಲ್ಲಿ ಯಾರಾದರೂ ಸರ್ಕಾರದ ವಿರುದ್ಧ ಮಾತನಾಡಿದರೆ ಅವರಿಗೆ ಶಿಕ್ಷೆ ನೀಡುವಂತೆ ಭಾರತದಲ್ಲೂ ಅದೇ ರೀತಿ ಮಾಡಲಾಗುತ್ತಿದೆ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. ದೇಶದಲ್ಲಿ ಹಣದುಬ್ಬರ ಒಂದೇ ಸಮನೆ ಹೆಚ್ಚುತ್ತಿದೆ. ಹಾಗಂತ ಅದನ್ನು ಯಾರೂ ಕೇಳುವಂತಿಲ್ಲ. ನಮ್ಮ ರಾಜನೂ ಕಿಮ್ ಜಾಂಗ್ ಉನ್ರಂತೆ ಆಗುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.