ನವದೆಹಲಿ: ಸರ್ಕಾರದೊಂದಿಗೆ ರೈತ ಮುಖಂಡರ ಏಳನೇ ಸುತ್ತಿನ ಸಭೆ ಸೋಮವಾರ ನಿರ್ಣಾಯಕ ಹಂತ ತಲುಪದ ಕಾರಣ ಕಿಸಾನ್ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಹೆಚ್ಚು ಆಕ್ರಮಣಕಾರಿ ಆಂದೋಲನ ನಡೆಸುವಂತೆ ಬೆದರಿಕೆ ಹಾಕಿದೆ. ಇನ್ನು ಎನ್‌ಎಸ್‌ಯುಐ ವಿದ್ಯಾರ್ಥಿ ಸಂಘ ರೈತರಿಗೆ ಬೆಂಬಲವಾಗಿ ಜೈಪುರದಿಂದ ದೆಹಲಿಗೆ 'ಸೈಕಲ್ ಯಾತ್ರೆ' ಪ್ರಾರಂಭಿಸಿದ್ದಾರೆ.
ಸರ್ಕಾರ ಮತ್ತು ರೈತ ಮುಖಂಡರು ಸೋಮವಾರ ವಿಜ್ಞಾನ ಭವನದಲ್ಲಿ ಮಾತುಕತೆ ನಡೆಸಿದ್ದರು. ಆದರೆ, ಆ ಮಾತುಕತೆ ವಿಫಲವಾಗಿದ್ದು, ಮುಂದಿನ ಸುತ್ತಿನ ಮಾತುಕತೆಯನ್ನು ಜನವರಿ 8 ರಂದು ನಿರ್ಧರಿಸಲಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಕಿಸಾನ್ ಕಾಂಗ್ರೆಸ್ ಉಪಾಧ್ಯಕ್ಷ ಸುರೇಂದ್ರ ಸೋಲಂಕಿ, ಏಳನೇ ಸುತ್ತಿನ ಮಾತುಕತೆ ವಿಫಲವಾಗಿದೆ. ಆ ಕಾರಣ ಈ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ನಾವು ಒತ್ತಾಯಿಸುತ್ತೇವೆ ಎಂದು ಹೇಳಿದರು.
ಕಳೆದ 40 ದಿನಗಳಿಂದ ನಮ್ಮ ರೈತರು ದೆಹಲಿಯ ಗಡಿಯಲ್ಲಿನ ಕಠಿಣ ಚಳಿಯಲ್ಲೂ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ, ಎಂದು ಸೋಲಂಕಿ ಹೇಳಿದರು.
ಇಲ್ಲಿಯವರೆಗೆ ನಮ್ಮ 63 ರೈತರು ಹುತಾತ್ಮರಾಗಿದ್ದಾರೆ. ಈ ದೇಶವು ಸರ್ಕಾರವನ್ನು ಯಾವುದೇ ರೀತಿಯಲ್ಲೂ ಕ್ಷಮಿಸುವುದಿಲ್ಲ. ನಾವು ಈ ಆಂದೋಲನವನ್ನು ದೇಶದ ಪ್ರತಿಯೊಂದು ಜಿಲ್ಲೆ ಮತ್ತು ಗ್ರಾಮಗಳಿಗೆ ಕೊಂಡೊಯ್ಯುತ್ತೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಇಂದು ಶ್ರೀಲಂಕಾಕ್ಕೆ ತೆರಳಲಿರುವ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್
ಈ ನಡುವೆ ಎನ್‌ಎಸ್‌ಯುಐ ತನ್ನ ಅಧ್ಯಕ್ಷ ನೀರಜ್ ಕುಂದನ್ ಅವರು 'ಕಿಸಾನ್ ಸೈಕಲ್ ಯಾತ್ರೆ' ಪ್ರಾರಂಭಿಸಿದ್ದಾರೆ. ಅವರು ಜೈಪುರದಿಂದ ದೆಹಲಿಗೆ ಸೈಕ್ಲಿಂಗ್ ಪ್ರಾರಂಭಿಸಿದ್ದು, ಮಂಗಳವಾರದ ವೇಳೆಗೆ ಉತ್ತರ ಪ್ರದೇಶದ ಶಹಜಹಾನ್ಪುರ ತಲುಪುವ ಸಾಧ್ಯತೆ ಇದೆ.
ರೈತರ ಹೋರಾಟಕ್ಕೆ ವರುಣರಾಯ ಮುನಿಸಿಕೊಂಡಂತೆ, ದೆಹಲಿಯಲ್ಲಿ ಮತ್ತೆ ಮಳೆ ಸುರಿದಿದೆ. ರೈತರು ಪ್ರತಿಭಟನೆ ನಡೆಸುತ್ತಿರುಬವ ಸಿಂಘು ಗಡಿ ಪ್ರದೇಶದಲ್ಲಿ ಮುಂಜಾನೆಯೇ ಮಳೆ ಸುರಿದಿದ್ದು, ರೈತರು ಪರದಾಡುವ ಪರಿಸ್ಥಿತಿ ಬಂದೊದಗಿದೆ.