ಸಿರ್ಸಾ: ಹರಿಯಾಣದಲ್ಲಿ ರೈತರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆ ರೈತರು ಇಂದು ಮಹಾ ಪಂಚಾಯತ್ ನಡೆಸಲಿದ್ದಾರೆ. ಬಳಿಕ ರೈತರು, ಸಿರ್ಸಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಘೇರಾವ್ ಹಾಕಲಿದ್ದಾರೆ. ಪರಿಸ್ಥಿತಿ ಎದುರಿಸಲು ಪೊಲೀಸ್ ಆಡಳಿತವೂ ಸಜ್ಜಾಗಿದ್ದು, ಹಲವೆಡೆ ಬ್ಯಾರಿಕೇಡ್ ಅಳವಡಿಸಿದೆ.
ರೈತರ ಈ ಹೋರಾಟದಲ್ಲಿ ಯುನೈಟೆಡ್ ಕಿಸಾನ್ ಮೋರ್ಚಾದ ಸದಸ್ಯರು ಮತ್ತು ರೈತ ಮುಖಂಡ ರಾಕೇಶ್ ಟಿಕಾಯತ್, ಗುರ್ನಮ್ ಚಧುನಿ ಮತ್ತು ಅನೇಕ ನಾಯಕರು ಭಾಗಿಯಾಗಬಹುದು ಎನ್ನಲಾಗಿದೆ. ಮೊದಲು ಶಹೀದ್ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಮಹಾಪಂಚಾಯತ್ ನಡೆಯಲಿದೆ. ಇದರಲ್ಲಿ ರೈತರು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾರೆ. ಬಳಿಕ ಎಸ್‌ಪಿ ಕಚೇರಿಯ ಘೇರಾವ್ ನಡೆಯಲಿದೆ. ಈ ಹೋರಾಟ ಶಾಂತಿಯುತವಾಗಿ ನಡೆಯಲಿದೆ ಎಂದು ರೈತ ನಾಯಕರು ತಿಳಿಸಿದ್ದಾರೆ
ಜುಲೈ 11 ರಂದು ಹರಿಯಾಣದ ಸಿರ್ಸಾ ಜಿಲ್ಲೆಯ ಚೌಧರಿ ದೇವಿ ಲಾಲ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ಉಪ ಸ್ಪೀಕರ್ ವಾಹನದ ಮೇಲೆ ರೈತರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೇ, ಘಟನೆಯಲ್ಲಿ ವಾಹನಗಳ ಗಾಜು ಜಖಂ ಆಗಿದೆ ಎಂದೂ ಆರೋಪಿಸಿದ್ದಾರೆ. ಈ ಹಿನ್ನೆಲೆ 100 ರೈತರ ವಿರುದ್ಧ ಸಿರ್ಸಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.