ನವದೆಹಲಿ: ರೈತರ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಸರ್ಕಾರ (ಎಂಎಸ್‌ಪಿ) ಕಡ್ಡಾಯವಾಗಿ ಖರೀದಿಸುವಾಗ ಬೆಳೆಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡುವ ಕಾನೂನು ಜಾರಿಗೆ ಒತ್ತಾಯಿಸಿ ದೇಶಾದ್ಯಂತದ ರೈತ ಸಂಘಟನೆಗಳು ಮತ್ತೊಮ್ಮೆ ದೆಹಲಿ ತಲುಪಿವೆ. 'ಎಂಎಸ್‌ಪಿ ಗ್ಯಾರಂಟಿ ಕಿಸಾನ್ ಮೋರ್ಚಾ' ಬ್ಯಾನರ್ ಅಡಿ ಅಕ್ಟೋಬರ್ 8 ರವರೆಗೆ ನಡೆಯಲಿರುವ ಮೂರು ದಿನಗಳ ಸಮಾವೇಶದಲ್ಲಿ ಭಾಗವಹಿಸಲು ರೈತರು ಇಲ್ಲಿಗೆ ಆಗಮಿಸಿದ್ದಾರೆ.
ದೆಹಲಿಯ ಹೊರಭಾಗದಲ್ಲಿರುವ ಪಂಜಾಬ್ ಖೋಡ್ ಎಂಬ ಹಳ್ಳಿಯನ್ನು ಕಾರ್ಯಕ್ರಮದ ಸ್ಥಳವಾಗಿ ಆಯ್ಕೆ ಮಾಡಲಾಗಿದೆ. ಸಮಾವೇಶದಲ್ಲಿ ಭಾಗವಹಿಸಲು ದೇಶದ 25 ರಾಜ್ಯಗಳ ರೈತ ಪ್ರತಿನಿಧಿಗಳು ದೆಹಲಿ ತಲುಪಿದ್ದಾರೆ. ಕಾರ್ಯಕ್ರಮದ ಸಂಚಾಲಕ ವಿಎಂ ಸಿಂಗ್ ಈಟಿವಿ ಭಾರತ್ ನೊಂದಿಗೆ ಮಾತನಾಡಿ, ಎಂಎಸ್‌ಪಿ ಗ್ಯಾರಂಟಿ ಕಿಸಾನ್ ಮೋರ್ಚಾದ ಮೊದಲ ದಿನದಂದು ದೇಶಾದ್ಯಂತ ಸುಮಾರು 3000 ರೈತ ಪ್ರತಿನಿಧಿಗಳು ಮತ್ತು ಸುಮಾರು 200 ರೈತ ಸಂಘಟನೆಗಳು ಇಲ್ಲಿಗೆ ಬಂದು ತಲುಪಿವೆ. ನಮ್ಮ ಮುಖ್ಯ ಬೇಡಿಕೆಗಳಲ್ಲಿ ಎಂಎಸ್‌ಪಿ ಖಾತರಿ ಕಾನೂನು ಕೂಡ ಒಂದು ಎಂದು ಹೇಳಿದರು.
2024 ರ ಚುನಾವಣೆಯ ಮೊದಲು ಸರ್ಕಾರವು ಈ ಕಾನೂನನ್ನು ತರಬೇಕು. ಇದು ಬಹಳ ಹಳೆಯ ಬೇಡಿಕೆಯಾಗಿದೆ ಮತ್ತು ದೇಶದ ಎಲ್ಲ ರೈತರು ತಮ್ಮ ಬೆಳೆಗಳಿಗೆ ನ್ಯಾಯಯುತ ಬೆಲೆಯನ್ನು ಪಡೆಯಬೇಕೆಂದು ಬಯಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರೇ ಮುಖ್ಯಮಂತ್ರಿಗಳ ಸಮಿತಿಯ ಅಧ್ಯಕ್ಷರಾಗಿದ್ದರು. ಆಗ ಎಂಎಸ್‌ಪಿ ಕಡ್ಡಾಯಗೊಳಿಸಬೇಕು ಎಂಬ ಬೇಡಿಕೆಯನ್ನು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಲಿಖಿತವಾಗಿ ಸಲ್ಲಿಸಿದ್ದರು. ಇಂದು ಅವರೇ ಪ್ರಧಾನಿ ಹುದ್ದೆಯಲ್ಲಿರುವಾಗ ಎಂಎಸ್‌ಪಿ ಕಡ್ಡಾಯಗೊಳಿಸುವ ಬೇಡಿಕೆಯನ್ನು ಈಡೇರಿಸಬೇಕು ಎಂದು ಸಿಂಗ್ ಒತ್ತಾಯಿಸಿದರು.
ನಮ್ಮ ಬೇಡಿಕೆಗಳು ಇನ್ನೂ ಈಡೇರಿಲ್ಲ: 2020 ರ ಸೆಪ್ಟೆಂಬರ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿಯಾದಾಗ ಕೂಡ ತಾನು ಇದೇ ಬೇಡಿಕೆಯನ್ನು ಅವರ ಮುಂದೆ ಮಂಡಿಸಿದ್ದೆ ಎಂದು ಸಿಂಗ್ ಹೇಳಿದರು. ಆದರೆ ಕೇಂದ್ರ ಸರ್ಕಾರ ಆಗ ಅವರ ಮಾತಿಗೆ ಕಿವಿಗೊಡಲಿಲ್ಲ. ಹೀಗಾಗಿ ಇದೀಗ ರೈತರು ಮತ್ತೊಮ್ಮೆ ಒಗ್ಗೂಡಿ ಎಂಎಸ್‌ಪಿ ಗ್ಯಾರಂಟಿ ಕಾನೂನಿಗೆ ಒತ್ತಾಯಿಸುವ ಸಮಯ ಬಂದಿದೆ.
ರಾಜು ಶೆಟ್ಟಿ ಮಾತನಾಡಿ, ಇಂದು ಕೇವಲ ಶೇ 5ರಷ್ಟು ಬೆಳೆಯನ್ನು ಸರ್ಕಾರವೇ ಖರೀದಿಸುತ್ತಿದೆ. ಉಳಿದದ್ದನ್ನು ಮಾರುಕಟ್ಟೆಯಲ್ಲಿಯೇ ಮಾರಾಟ ಮಾಡಲಾಗುತ್ತದೆ. ಎಂಎಸ್‌ಪಿ ದರದಲ್ಲಿ ಖರೀದಿ ಮಾಡುವುದನ್ನು ಕಡ್ಡಾಯಗೊಳಿಸಿದರೆ ರೈತರಿಗೆ ದೊಡ್ಡ ಪರಿಹಾರ ಸಿಕ್ಕಂತಾಗುತ್ತದೆ. ದೇಶದಲ್ಲಿ ಕನಿಷ್ಠ ಕೂಲಿ ದರವನ್ನು ಕಡ್ಡಾಯಗೊಳಿಸಬಹುದಾದರೆ ಎಂಎಸ್‌ಪಿ ಗ್ಯಾರಂಟಿ ಕಾನೂನು ಮಾಡುವುದು ಕೂಡ ಸಾಧ್ಯ ಎಂದರು.
ಮತ್ತೊಂದೆಡೆ, ರೈತರ ಬೆಂಬಲ ಮತ್ತು ಇತರ ಬೇಡಿಕೆಗಳ ಕುರಿತು ಕೇಂದ್ರ ಸರ್ಕಾರ ರಚಿಸಿರುವ ಸಮಿತಿಯನ್ನು ರೈತ ಮುಖಂಡರು ಮತ್ತೊಮ್ಮೆ ತಿರಸ್ಕರಿಸಿದ್ದಾರೆ. ಸಮಸ್ಯೆಯನ್ನು ಕಡೆಗಣಿಸುವ ಸಲುವಾಗಿಯೇ ಈ ಸಮಿತಿಯನ್ನು ರಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಎಂಎಸ್‌ಪಿ ಕಾನೂನು ಖಾತ್ರಿಪಡಿಸುವವರೆಗೆ ಹೋರಾಟ ಮುಂದುವರಿಯುತ್ತದೆ : ರಾಕೇಶ್ ಟಿಕಾಯತ್