ನವದೆಹಲಿ: ಕಳೆದ 15 ತಿಂಗಳಿಂದ ಸತತವಾಗಿ ಪ್ರತಿಭಟನೆ ನಡೆಸುತ್ತಿದ್ದ ಅನ್ನದಾತರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಹಾಗಾಗಿ ತಮ್ಮ ಪ್ರತಿಭಟನೆ ಹಿಂಪಡೆದುಕೊಳ್ಳುವುದಾಗಿ ಇಂದು ಅಧಿಕೃತವಾಗಿ ಸಂಯುಕ್ತ ಕಿಸಾನ್ ಮೋರ್ಚಾ ಘೋಷಣೆ ಮಾಡಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ವಿವಾದಿತ ಕೃಷಿ ಕಾಯ್ದೆ ರದ್ಧತಿ ಹೊರತಾಗಿ ಕೂಡ ಕನಿಷ್ಠ ಬೆಂಬಲ ಬೆಲೆ ಜಾರಿ, ಲಖೀಂಪುರಿ ಖೇರಿ ಹಾಗೂ ಟ್ರ್ಯಾಕ್ಟರ್ ಮೋರ್ಚಾ ವೇಳೆ ಅನ್ನದಾತರ ಮೇಲೆ ದಾಖಲಾಗಿದ್ದ ಎಫ್ಐಆರ್ ಹಿಂಪಡೆದುಕೊಳ್ಳುವಂತೆ ರೈತರು ಪಟ್ಟು ಹಿಡಿದು, ತಮ್ಮ ಹೋರಾಟ ಮುಂದುವರೆಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಸಹ ಬರೆದಿದ್ದರು.
ಇದೀಗ, ಕೇಂದ್ರ ಸರ್ಕಾರ ಹಾಗೂ ರೈತ ಸಂಘಟನೆಗಳ ಮಧ್ಯೆ ಮಹತ್ವದ ಒಪ್ಪಂದವಾಗಿದ್ದು, ಮೋದಿ ಸರ್ಕಾರ ರೈತ ಸಂಘಟನೆಗಳ ಎಲ್ಲ ಬೇಡಿಕೆ ಈಡೇರಿಸುವುದಾಗಿ ಲಿಖಿತ ರೂಪದಲ್ಲಿ ಒಪ್ಪಿಗೆ ಸೂಚಿಸಿದೆ. ಇದರ ಬೆನ್ನಲ್ಲೇ ತಮ್ಮ ಹೋರಾಟ ಅಂತ್ಯಗೊಳಿಸುವುದಾಗಿ ರೈತರು ತಿಳಿಸಿದ್ದಾರೆ. ಡಿಸೆಂಬರ್ 11ರಿಂದ ದೆಹಲಿ-ಹರಿಯಾಣದ ಸಿಂಘು ಗಡಿಯಿಂದ ತೆರಳುವುದಾಗಿ ರೈತ ಸಂಘಟನೆಗಳು ಘೋಷಣೆ ಮಾಡಿವೆ.
ರೈತರ ಯಾವೆಲ್ಲ ಬೇಡಿಕೆಗೆ ಕೇಂದ್ರ ಒಪ್ಪಿಗೆ
- ಕೇಂದ್ರ ಸರ್ಕಾರದಿಂದ ಹೊರಬಿದ್ದಿರುವ ಪತ್ರದ ಪ್ರಕಾರ ಕನಿಷ್ಠ ಬೆಂಬಲ ಬೆಲೆ ಸಮಿತಿ ರಚನೆ
- ಬಾಕಿ ಉಳಿದಿರುವ ರೈತರ ಪಂಪ್ಸೆಟ್ ವಿದ್ಯುತ್ ಬಿಲ್ ಮಸೂದೆ ವಾಪಸ್
- ರೈತರ ಮೇಲಿನ ಎಲ್ಲ ಕ್ರಿಮಿನಲ್ ಕೇಸ್ ತಕ್ಷಣ ಹಿಂಪಡೆದುಕೊಳ್ಳಲು ಒಪ್ಪಿಗೆ
ಇಂದು 12 ಗಂಟೆಗೆ ಸಭೆ ನಡೆಸಿರುವ ರೈತರ ಸಂಘಟನೆಗಳು ತಮ್ಮ ಸುದೀರ್ಘ ಹೋರಾಟ ಹಿಂಪಡೆದುಕೊಳ್ಳುವುದಾಗಿ ಘೋಷಣೆ ಮಾಡಿದ್ದು, ಇದರ ಬೆನ್ನಲ್ಲೇ ರೈತರು ಮನೆಗಳತ್ತ ಮುಖ ಮಾಡಿದ್ದಾರೆ. ಇದೇ ವಿಚಾರವಾಗಿ ಮಾತನಾಡಿರುವ ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ಗುರ್ನಾಮ್ ಸಿಂಗ್, ನಮ್ಮ ಹೋರಾಟ ಹಿಂಪಡೆದುಕೊಳ್ಳಲು ನಿರ್ಧರಿಸಿದ್ದೇವೆ. ಜನವರಿ 15ರಂದು ಮತ್ತೊಮ್ಮೆ ಸಭೆ ನಡೆಸಲು ನಿರ್ಧರಿಸಿದ್ದು, ಒಂದು ವೇಳೆ ಕೇಂದ್ರ ಸರ್ಕಾರ ನೀಡಿರುವ ಭರವಸೆ ಈಡೇರಿಕೆ ಮಾಡುವಲ್ಲಿ ವಿಫಲವಾದರೆ ಹೋರಾಟ ಪುನಾರಂಭ ಮಾಡುತ್ತೇವೆ ಎಂದಿದ್ದಾರೆ.
ದೆಹಲಿ- ಹರಿಯಾಣ ಸಿಂಘು ಗಡಿಯಲ್ಲಿ ರೈತರು ನಿರ್ಮಾಣ ಮಾಡಿದ್ದ ಟೆಂಟ್ಗಳನ್ನ ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದು, ಡಿಸೆಂಬರ್ 13ರಂದು ಪಂಜಾಬ್ನ ಅಮೃತ್ಸರ್ಗೆ ತೆರಳಲಿದ್ದಾರೆ.