ನವದೆಹಲಿ: ಜನವರಿ 26 ರ ಹಿಂಸಾಚಾರದಲ್ಲಿ ಭಾಗಿಯಾದ ಆರೋಪದ ಮೇಲೆ ಪ್ರತಿಭಟನಾಕಾರರಿಗೆ ನೋಟಿಸ್ ನೀಡಿದ ಹಿನ್ನೆಲೆ ರೈತ ಹೋರಾಟಗಾರರು ಕೆಂಡಾಮಂಡಲರಾಗಿದ್ದಾರೆ.
ಗಾಜಿಪುರ ಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ಜಗ್ತಾರ್ ಸಿಂಗ್ ಬಜ್ವಾ, ಪೊಲೀಸರು ಮತ್ತು ಕೇಂದ್ರ ಸರ್ಕಾರ ಸರ್ವಾಧಿಕಾರದ ಮಿತಿಗಳನ್ನು ದಾಟಿದ್ದಾರೆ. ಚಳವಳಿಯನ್ನು ಹತ್ತಿಕ್ಕಲು ಸರ್ಕಾರ ಕೆಲಸ ಮಾಡುತ್ತಿದೆ. ರೈತ ಚಳವಳಿಯಲ್ಲಿ ಭಾಗಿಯಾಗಿರುವ ಅನ್ನದಾತರನ್ನು ಅವಮಾನಿಸಿದೆ. ದೆಹಲಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಗಣರಾಜ್ಯೋತ್ಸವದಂದು ಆಕೆಯ ಫೋನ್ ನೆಟ್ವರ್ಕ್ ಗಲಭೆಯಾದ ಜಾಗದಲ್ಲಿ ಸಕ್ರಿಯವಾಗಿದ್ದರಿಂದ ನೋಟಿಸ್ ಕಳುಹಿಸಲಾಗಿದೆ.
ಹೋರಾಟ ಮಾಡುವ ರಸ್ತೆಗಳನ್ನು ಮುಚ್ಚಿ ಚಳವಳಿಯನ್ನು ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಗಾಜಿಪುರ ಗಡಿಯಲ್ಲಿನ 100 ಕ್ಕೂ ಹೆಚ್ಚು ರೈತರು ಹಾಗೂ ಹಿಂಸಾಚಾರವನ್ನು ಪ್ರಚೋದಿಸಿದ ಆರೋಪದ ಮೇಲೆ ದೇಶಾದ್ಯಂತ 1,700 ರೈತರಿಗೆ ನೋಟಿಸ್ ಕಳುಹಿಸಲಾಗಿದೆ. ಇಂದು ಸಂಜೆ ಪಂಜಾಬ್‌ನ 10 ವಕೀಲರಿರುವ ಸಮಿತಿ ಗಾಜಿಪುರ ಗಡಿಯನ್ನು ತಲುಪುತ್ತಿದ್ದು, ಕಾನೂನು ಕ್ರಮಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ರೈತರೊಂದಿಗೆ ಚರ್ಚೆ ನಡೆಸಲಿದೆ ಎಂದು ತಿಳಿಸಿದ್ದಾರೆ.