ನವದೆಹಲಿ: ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಸಿಸಿ) ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ಗೆ ಪತ್ರ ಬರೆದಿದ್ದು,"ರೈತರ ಪ್ರತಿಭಟನೆ ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ್ದಲ್ಲ" ಎಂದು ಸ್ಪಷ್ಟನೆ ನೀಡಿದೆ.
ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಪ್ರತಿಪಕ್ಷಗಳು ಕುಮ್ಮಕ್ಕು ನೀಡುತ್ತಿವೆ ಎಂಬುದು ಕೇಂದ್ರದ ಊಹೆ ತಪ್ಪು ಎಂದು ಹಿಂದಿಯಲ್ಲಿ ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ. ಕೃಷಿ ಕಾನೂನುಗಳ ಬಗ್ಗೆ ಪ್ರತಿಪಕ್ಷಗಳು ರೈತರನ್ನು ದಾರಿ ತಪ್ಪಿಸಿವೆ ಎಂದು ಪ್ರಧಾನಿ ಆರೋಪಿಸಿದ ಮರುದಿನವೇ ರೈತರು ಈ ಪತ್ರವನ್ನು ಬರೆದಿದ್ದಾರೆ.
ಇದನ್ನು ಓದಿ: ಸರ್ಕಾರದ ಪ್ರಸ್ತಾಪ ಒಪ್ಪಿ ಪ್ರತಿಭಟನೆ ಹಿಂಪಡೆಯಿರಿ: ಕೃಷಿ ಸಚಿವ ತೋಮರ್ ಮನವಿ
ಡಿ.18ರಂದು ಮಧ್ಯಪ್ರದೇಶದ ರೈತರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಹೊಸ ಕೃಷಿ ಕಾನೂನುಗಳನ್ನು ಸಮರ್ಥಿಸಿಕೊಂಡಿದ್ದರು. ಈ ಕೃಷಿ ಕಾಯ್ದೆಗಳನ್ನ ಕಳೆದ ಕೆಲ ವರ್ಷಗಳಿಂದ ಚಿಂತನೆ ನಡೆಸಿ, ಯೋಜಿಸಿ ಜಾರಿಗೊಳಿಸಿದ್ದೇವೆ. ದಯವಿಟ್ಟು ರಾಜಕೀಯ ಪಕ್ಷಗಳು ರೈತರ ದಾರಿ ತಪ್ಪಿಸಬೇಡಿ ಎಂದು ಪ್ರಧಾನಿ ಮನವಿ ಮಾಡಿದ್ದರು. ಈ ಬೆನ್ನಲ್ಲೇ ಸ್ಪಷ್ಟನೆ ನೀಡಿ ರೈತರು ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಡಿ.17ರಂದು ತೋಮರ್ ಅವರು, ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಹೊಸ ಕೃಷಿ ಕಾನೂನುಗಳ ಬಗ್ಗೆ ಸುಳ್ಳು ಸುದ್ದಿ ಹರಡಿದ್ದಾರೆ ಎಂದು ಆರೋಪಿಸಿದ್ದರು.