ಹೋಶಿಯಾರ್‌ಪುರ: ಪಂಜಾಬ್‌ನ ಬಹುತೇಕ ಯುವಕರು ವಿದೇಶಕ್ಕೆ ಹೋಗುವ ಕನಸು ಕಾಣುತ್ತಾರೆ. ಹೆಚ್ಚಿನ ಯುವಕರು ಜೀವನೋಪಾಯಕ್ಕಾಗಿ ಮತ್ತು ತಮ್ಮ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಲು ವಿದೇಶಕ್ಕೆ ಹೋಗುತ್ತಾರೆ. ಆದರೆ, ವಿದೇಶಕ್ಕೆ ಹೋಗಿ ಜೀವನ ಸಾಗಿಸುವ ಕನಸು ನನಸಾಗಿರುವುದು ಮಾತ್ರ ಬೆರಳೆಣಿಕೆಯಷ್ಟು ಮಾತ್ರ. ಈ ರೀತಿ ಜೀವನೋಪಾಯಕ್ಕಾಗಿ ದುಬೈಗೆ ಹೋಗಿ ಸಿಕ್ಕಿಬಿದ್ದ ಯುವಕನಿಗಾಗಿ ಗರ್ಶಂಕರ್ನ ಕುಟುಂಬವೊಂದು ಸಹಾಯ ಕೋರಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮಾಹಿತಿ ಪ್ರಕಾರ ಗರ್ಶಂಕರದ ಮಹಿಗ್ರೋವಲ್ ಗ್ರಾಮದ ಯುವಕನೊಬ್ಬ ನಾಲ್ಕು ವರ್ಷಗಳ ಹಿಂದೆ ಜೀವನೋಪಾಯಕ್ಕಾಗಿ ದುಡಿಯಲು ದುಬೈಗೆ ಹೋಗಿದ್ದ. ಆದರೆ, ಅಲ್ಲಿ ನಡೆದ ಅಪಘಾತದಿಂದಾಗಿ ಆ ಯುವಕ ಜೈಲಿನಲ್ಲಿ ಸೆರೆಯಾಗಿದ್ದಾನೆ. ಜೈಲಿನಿಂದ ಹೊರ ಬರಬೇಕಾದರೆ ಯುವಕನಿಗೆ ವಿಧಿಸಿರುವ ದಂಡವನ್ನು ಕಟ್ಟಬೇಕಾಗಿದೆ. ಆದರೆ, ಆ ದಂಡವನ್ನು ಕಟ್ಟುವ ಸಾಮರ್ಥ್ಯ ಆತನಲ್ಲಿಲ್ಲ. ಈಗ ಯುವಕನನ್ನು ಜೈಲಿನಿಂದ ಬಿಡಿಸಿ ಕರೆದುಕೊಂಡು ಬರಲು ಕುಟುಂಬಸ್ಥರು ನೆರವಿನ ಸೆರಗೊಡ್ಡಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಮಗ ದುಬೈಗೆ ಹೋಗಿದ್ದ. ಏಪ್ರಿಲ್ 2, 2021 ರಂದು, ದುಬೈನಲ್ಲಿ ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಭಾರತದ ಯುವಕನಿಗೆ ದುಬೈ ಕಾನೂನಿನಡಿ ಕೋರ್ಟ್ 6 ತಿಂಗಳ ಜೈಲು ಶಿಕ್ಷೆ ಮತ್ತು ಭಾರತೀಯ ಕರೆನ್ಸಿಯಲ್ಲಿ 42 ಲಕ್ಷ ರೂ. ದಂಡ ವಿಧಿಸಿತ್ತು. ಆದರೆ, ಆತ ದಂಡ ಕಟ್ಟಲಾಗದೇ ಇನ್ನೂ ಜೈಲಿನಲ್ಲೇ ಇದ್ದಾನೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
ಯುವಕನ ಕುಟುಂಬ ಸದಸ್ಯರು, ಗ್ರಾಮದ ಸರಪಂಚ್, ಮಾಜಿ ಬಿಜೆಪಿ ಸಂಸದ ಅವಿನಾಶ್ ರೈ ಖನ್ನಾ ಅವರೊಂದಿಗೆ, ತಮ್ಮ ಮಗನನ್ನು ವಾಪಸ್ ಭಾರತಕ್ಕೆ ಕರೆತರಲು ಸಹಾಯ ಮಾಡುವಂತೆ ಸರ್ಕಾರ ಮತ್ತು ಜನರಿಗೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ದುಬೈ ಬಳಿಕ ಚಿನ್ನ ಕಳ್ಳಸಾಗಣೆಗೆ ಹೊಸ ಮಾರ್ಗ: ದೆಹಲಿಗೆ ಬಂದಿಳಿದ ಕೀನ್ಯಾ ಪ್ರಜೆಗಳಲ್ಲಿತ್ತು 15 ಕೆಜಿ ಬಂಗಾರ!