ಚೆನ್ನೈ:ತಂಜಾವೂರು ಮೂಲದ ವೈದ್ಯ ಸೆಂಬಿಯನ್ (35) ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು. 2013ರಲ್ಲಿ ರಷ್ಯಾದಲ್ಲಿ ಎಂಡಿ ಮೆಡಿಕಲ್ ಕೋರ್ಸ್ ಮುಗಿಸಿದ ಬಳಿಕ ತಮ್ಮ ವೈದ್ಯ ಪದವಿಗೆ ದಾಖಲಾಗಿ ತಮಿಳುನಾಡು ಮೆಡಿಕಲ್ ಕೌನ್ಸಿಲ್ ಮುಂದೆ ಹೋದರು. ಇಲ್ಲಿ ತಮ್ಮ ಹೆಸರನ್ನು ದಾಖಲಿಸಿದ ಬಳಿಕ, ಭಾರತೀಯ ವೈದ್ಯಕೀಯ ಮಂಡಳಿಯಲ್ಲಿ ದಾಖಲಾತಿ ಪಡೆದರು. ನಂತರ ಗುಜರಾತ್ ಕೆಲಸ ನಿರ್ವಹಿಸಿ, ಬಳಿಕ ಇದೀಗ ದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇತ್ತೀಚೆಗಷ್ಟೆ ಮದುವೆಯಾದ ಇವರು, ತಮಿಳುನಾಡಿನಲ್ಲಿ ನೆಲೆಯೂರಬೇಕು ಎಂದು ಉದ್ದೇಶಿಸಿ, ತಮ್ಮ ಪದವಿ ಪ್ರಮಾಣ ಪತ್ರವನ್ನು ಮೆಡಿಕಲ್ ಕೌನ್ಸಿಲ್ ವೆಬ್ಸೈಟ್ನಲ್ಲಿ ದಾಖಲಿಸಲು ಮುಂದಾಗಿದ್ದಾರೆ. ಆದರೆ, ಅನೇಕ ಪ್ರಯತ್ನಗಳ ನಂತರವೂ ಈ ದಾಖಲಾತಿ ಸಾಧ್ಯವಾಗಿಲ್ಲ. ಈ ಹಿನ್ನೆಲೆ ಅರುಂಬಕ್ಕಂನಲ್ಲಿರುವ ತಮಿಳುನಾಡು ಮೆಡಿಕಲ್ ಕೌನ್ಸಿಲ್ಗೆ ಭೇಟಿ ನೀಡಿ ವಿಚಾರಿಸಿದ್ದಾರೆ. ಈ ವೇಳೆ ಪರಿಶೀಲನೆ ನಡೆಸಿದಾಗ, ಡಾ ಸೆಂಬಿಯನ್ ಅವರ ಬದಲು ವಿಭಿನ್ನ ಫೋನ್ ನಂ ಮತ್ತು ಇಮೇಲ್ ಐಡಿ ದಾಖಲಾಗಿತ್ತು. ಈ ಸಂಬಂಧ ದೂರು ಸಲ್ಲಿಸುವಂತೆ ಸಲಹೆ ನೀಡಲಾಯಿತು. ಈ ಪ್ರಕರಣವನ್ನು ಅಣ್ಣನಗರ ಸೈಬರ್ ಕ್ರೈಂ ಪೊಲೀಸ್ಗೆ ವರ್ಗಾವಣೆ ಮಾಡಲಾಯಿತು.
ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದರ ಪತ್ತೆಗಾಗಿ ಪೊಲೀಸ್ ಇನ್ಸ್ಪೆಕ್ಟರ್ ಶಾಂತಿದೇವಿ ನೇತೃತ್ವದಲ್ಲಿ ಒಂದು ತಂಡ ರಚಿಸಿದರು. ತನಿಖೆಗೆ ಮುಂದಾದ ಪೊಲೀಸರಿಗೆ ಅಸಲಿ ವಿಷಯ ತಿಳಿದು ಶಾಕ್ ಆದರು. ಕಾರಣ ಇದೇ ಹೆಸರಿನ ವೈದ್ಯರೊಬ್ಬರು ಮೈಲಾಡುತುರೈ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈತ ನಕಲಿ ವೈದ್ಯನಾಗಿದ್ದು, ಅಸಲಿ ವೈದ್ಯನ ಹೆಸರು, ಪದವಿಯನ್ನು ಬಳಸಿಕೊಂಡಿದ್ದಾನೆ ಎಂಬುದು ಪತ್ತೆಯಾಯಿತು.
ಏನಿದು ವಂಚನೆ: ಬೇರೆಯವರ ಹೆಸರು ಪದವಿ ಬಳಕೆ ಮಾಡಿ ವಂಚನೆ ಮಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದು, ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಮೈಲಾಡುತುರೈನ ಏರೋನಾಟಿಕಲ್ ಇಂಜಿನಿಯರ್ ಸೆಂಬಿಯನ್ (31) ನಿಜವಾದ ವೈದ್ಯನ ಪದವಿಯನ್ನು ತಮ್ಮ ಹೆಸರಿನಲ್ಲಿ ವಂಚನೆಗೆ ಬಳಸಿಕೊಂಡಿದ್ದಾರೆ. 2012 ಪುದುಕೊಟ್ಟೈನಲ್ಲಿ ಬಿಇ ಪದವಿ ಪಡೆದಿದ್ದರು. 2017ರಲ್ಲಿ ಚೆನ್ನೈಗೆ ಕೆಲಸ ಹುಡುಕಿಕೊಂಡು ಬಂದ ಈತ ಓದಿಗೆ ತಕ್ಕ ಕೆಲಸ ಸಿಗದೇ, ಖಾಸಗಿ ಕಂಪನಿಯಲ್ಲಿ ಉದ್ಯೋಗ ಆರಂಭಿಸಿದ.
ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಮಾರ್ಕೆಟಿಂಗ್ನಲ್ಲಿ ಕೆಲಸವನ್ನು ಪಡೆದರು. ಖಾಸಗಿ ಐಟಿ ಮತ್ತು ದೊಡ್ಡ ಕಂಪನಿಗಳನ್ನು ತಮ್ಮ ಆಸ್ಪತ್ರೆ ಜೊತೆ ಸಂಪರ್ಕ ಕಲ್ಪಿಸುವುದು ಈತನ ಕೆಲಸವಾಗಿತ್ತು. ಇದರಿಂದ ಈತ ಕೆಲವು ಮೆಡಿಸಿನ್ ಜ್ಞಾನ ಪಡೆದುಕೊಂಡಿದ್ದ. ವೈದ್ಯಕೀಯ ಕ್ಷೇತ್ರದಲ್ಲಿ ಹಣ ಬರುತ್ತಿದ್ದನ್ನು ಗಮನಿಸಿ, ವೈದ್ಯನಾಗಬೇಕು ಎಂದು ನಿರ್ಧರಿಸಿದ.
ಇದಕ್ಕಾಗಿ ಫಸ್ಟ್ ಎಡ್, ಫೈರ್ ಅಂಡ್ ಸೆಫ್ಟಿ, ಸ್ಕಾನ್ ಡಿಪ್ಲೊಮಾ ಕೋರ್ಸ್ ಅನ್ನು ಪಡೆದ. ಬಳಿಕ ತನ್ನ ಹೆಸರಿನಲ್ಲಿ ಯಾರಾದರೂ ವೈದ್ಯರಿದ್ದಾರಾ ಎಂದು ಗೂಗಲ್ ಮೂಲಕ ಶೋಧನೆ ನಡೆಸಿದಾಗ ಮೂವರ ಹೆಸರು ಕಂಡು ಬಂದಿದೆ. ಈ ವೇಳೆ, ತಂಜಾವೂರಿನ ವೈದ್ಯ ತನ್ನ ವಯಸ್ಸನ್ನೇ ಹೊಂದಿರುವುದರಿಂದ ಆತನನ್ನು ಆರಿಸಿಕೊಂಡು ಆತನ ಹೆಸರಿನಲ್ಲಿ ನಕಲಿ ಪ್ರಮಾಣಪತ್ರಗಳನ್ನು ಈತ ಮೆಡಿಕಲ್ ಕೌನ್ಸಿಲ್ಗೆ ಅಪ್ಲೋಡ್ ಮಾಡಿದ್ದಾನೆ. ಇದಕ್ಕಾಗಿ ತನ್ನದೇ ಮೊಬೈಲ್ ನಂಬರ್, ಇಮೇಲ್ ಎಲ್ಲವನ್ನೂ ನೀಡಿದ್ದಾನೆ. ಬಳಿಕ ನಿಜವಾದ ಡಾಕ್ಟರ್ ಫೋಟೋವನ್ನು ಎಡಿಟ್ ಮಾಡಿ, ತನ್ನ ಫೋಟೋವನ್ನು ಹಾಕಿ ದಾಖಲಾತಿ ಪಡೆದುಕೊಂಡಿದ್ದಾನೆ.
ಬಳಿಕ ನಿಲಂಗರೈನ ಅಸ್ತ್ರ ಆಸ್ಪತ್ರೆ ಮತ್ತು ಶಾಂತಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿದ್ದಾನೆ. ಕೋವಿಡ್ ಸಂದರ್ಭದಲ್ಲಿ ವೈದ್ಯರಿಗೆ ಬೇಡಿಕೆ ಹೆಚ್ಚಾದಾಗ, ಈತನ ಸರ್ಟಿಫಿಕೇಟ್ ಅನ್ನು ಸರಿಯಾಗಿ ಚೆಕ್ ಮಾಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ನಿರಂತರವಾಗಿ ಕಾರ್ಯ ನಿರ್ವಹಿಸಿದ್ದಾನೆ. ಇದಾದ ಬಳಿಕ ತರಮನಿ ಯಲ್ಲಿ ಕಳೆದ ಮೂರು ತಿಂಗಳಿನಿಂದ ಸ್ಪಾರ್ಕ್ ಫ್ಯಾಮಿಲಿ ಕ್ಲಿನಿಕ್ ಎಂಬ ಆಸ್ಪತ್ರೆ ಕೂಡಾ ತೆರೆದಿದ್ದಾನೆ. ಈತನ ಬಳಿ ಸಮಸ್ಯೆ ಹೇಳಿ ಬಂದ ರೋಗಿಗಳಿಗೆ ಗೂಗಲ್ ಸಹಾಯದಿಂದ ಔಷಧ ನೀಡಿದ್ದಾನೆ.
ಸದ್ಯ ಅಸಲಿ ವೈದ್ಯರಿಂದಾಗಿ ಇದೀಗ ನಕಲಿ ವೈದ್ಯ ಸಿಕ್ಕಿ ಬಿದ್ದಿದ್ದಾನೆ. ಆತನನ್ನು ವಶಕ್ಕೆ ಪಡೆದಿರುವ ಸೈಬರ್ ಪೊಲೀಸರು, ತನಿಖೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ಆರು ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಫೇಲ್; ಸೋಲೇ ಗೆಲುವಿನ ಮೆಟ್ಟಿಲೆಂದು ಏಳನೇ ಬಾರಿಗೆ ಐಪಿಎಸ್ ಆದ ಸಾಧಕ