ನವದೆಹಲಿ: ಒರಟು, ಬಂಜರು ಮತ್ತು ಆಮ್ಲಜನಕ ಕ್ಷೀಣಿಸಿದ ಪ್ರದೇಶವಾದ ಪೂರ್ವ ಲಡಾಕ್ ಭೂಮಿಯ ಮೇಲಿನ ಬೇರಾವುದೇ ಯುದ್ಧ ಭೂಮಿಗಿಂತಲೂ ಅತೀ ಕಷ್ಟಕರವಾದ ಯುದ್ಧ ವಲಯ ಎನಿಸಿದೆ. ಅಂತಹ ಪ್ರದೇಶದಲ್ಲಿ ವಾಸ್ತವ್ಯ ಹೂಡುವುದೇ ಕಷ್ಟವಾಗಿದ್ದಾಗ ಚೀನಾದೊಂದಿಗಿನ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿ ಗಡಿಯಲ್ಲಿ ನಿಯೋಜಿಸಲಾಗಿರುವ ಸಾವಿರಾರು ಭಾರತೀಯ ಸೈನಿಕರು ಇದನ್ನು ಪಿಕ್ನಿಕ್ ನಂತೆ ಕಳೆಯುತ್ತಿದ್ದಾರೆ.
ಮುಂದಿನ ಆದೇಶದವರೆಗೆ ಸೈನಿಕರು ಈ ಮೈಕೊರೆಯುವ ಚಳಿಯಲ್ಲಿ ಕೆಲಸ ಮಾಡಬೇಕಿದೆ. “ಏಪ್ರಿಲ್ ಅಂತ್ಯದಿಂದ ಎಲ್ಎಸಿಯಲ್ಲಿ ಚೀನಾ ಸೈನಿಕರ ಕಿರಿಕ್ ಜಾಸ್ತಿ ಆದ ಬಳಿಕ ಹಾಗೂ ಚೀನಾ ದೌರ್ಜನ್ಯದ ಬಳಿಕ ಲಡಾಖ್‌ನಲ್ಲಿ ಭಾರತೀಯ ಸೇನೆಯನ್ನ ಹೆಚ್ಚಿಸಲಾಗಿದೆ. ಎಲ್ಎಸಿ ಉದ್ದಕ್ಕೂ ಶಸ್ತ್ರಸಜ್ಜಿತ ಭಾರತೀಯ ಪಡೆ ಗಡಿಯನ್ನು ಕಾಪಾಡುತ್ತಿದೆ” ಎಂದು ವಿಶ್ವದ ಅತ್ಯುನ್ನತ ಯುದ್ಧಭೂಮಿಯಲ್ಲಿ ನಿಯೋಜನಾ ಕಾರ್ಯ ಕೈಗೊಳ್ಳುವ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಲಾ 1,000 ಹೋರಾಟಗಾರರನ್ನು ಒಳಗೊಂಡ ಪ್ರತಿ ಕಾಲಾಳುಪಡೆ ಘಟಕವನ್ನು ಸುಮಾರು ಎರಡು ವರ್ಷಗಳ ಕಾಲಾವಧಿಗೆ ಲಡಾಖ್ ಪ್ರದೇಶಕ್ಕೆ ನಿಯೋಜಿಸಲಾಗಿದೆ. ಅದರಲ್ಲಿ ಒಂದು ವರ್ಷವನ್ನು ಸಿಯಾಚಿನ್‌ನಲ್ಲಿ ಮತ್ತು ಇನ್ನೊಂದು ವರ್ಷವನ್ನು ಲಡಾಖ್‌ನಲ್ಲಿ ಕಳೆಯುವಂತೆ ಈ ಪಡೆಗಳನ್ನ ನಿಯೋಜನೆ ಮಾಡಲಾಗಿದೆ. ದೇಶದ ರಕ್ಷಣೆಗಾಗಿ ಸೈನಿಕರು ಅಪಾಯಕಾರಿ ವಾತಾವರಣದಲ್ಲೂ ಪಿಕ್ನಿಕ್ಗೆ ಬಂದವರಂತೆ ಗಡಿ ರಕ್ಷಣೆಗೆ ನಿಂತಿದ್ದಾರೆ.
ಸಮುದ್ರಮಟ್ಟದಿಂದ 12ಸಾವಿರ ಅಡಿ ಎತ್ತರದಲ್ಲಿ ಸೈನಿಕರು ನಿಯೋಜನೆಗೊಂಡಿದ್ದಾರೆ. ಮೈನಸ್ 50 ಡಿಗ್ರಿ ಸೆಲ್ಷಿಯಸ್ನಷ್ಟು ತಾಪಮಾನ ಇಲ್ಲಿ ದಾಖಲಾಗುತ್ತದೆ. ಚಳಿಗಾಲದಲ್ಲಿ ಇಲ್ಲಿನ ಸಂಪರ್ಕ ಕಡಿತಗೊಳ್ಳುತ್ತದೆ. ಭಾರಿ ಹಿಮ ಸುರಿಯುವುದರಿಂದ ಇಲ್ಲಿ ಬದುಕುವುದೇ ಬಹು ಕಷ್ಟ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಸೈನಿಕರು ಇಲ್ಲಿ ಕೆಲಸ ಮಾಡಬೇಕಾಗುತ್ತದೆ.
ಸರಿ ಸುಮಾರು 1ಲಕ್ಷ ಸೈನಿಕರನ್ನು ಭಾರತೀಯ ಸೇನಾಪಡೆ ನಿಯೋಜನೆ ಮಾಡಿದೆ. ಸಹಜವಾಗಿ ಪಾಕಿಸ್ತಾನ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನ ನಿಯೋಜನೆಗೊಳಿಸಲಾಗುತಿತ್ತು. ಈಗ ಚೀನಾ ಗಡಿಯಲ್ಲೂ ಇದೇ ಪರಿಸ್ಥಿತಿ ನಿರ್ಮಾಣಗೊಂಡಿದೆ. ಒಂದೆಡೆ ಶಾಂತಿ ಮಾತುಕತೆ ಮುಂದುವರೆದಿದ್ದರೂ ಇನ್ನೊಂದು ಕಡೆ ಯುದ್ಧ ಸನ್ನದ್ಧತೆಯಲ್ಲಿ ಎರಡೂ ರಾಷ್ಟ್ರದ ಸೇನೆಗಳಿವೆ.