ನವದೆಹಲಿ : ನೂತನ ಐಟಿ ನಿಯಮಗಳ ಪ್ರಕಾರ ಜುಲೈ 2ರಂದು ಮಧ್ಯಂತರ ವರದಿ ಪ್ರಕಟಿಸುವುದಾಗಿ ಸಾಮಾಜಿಕ ಮಾಧ್ಯಮ ದೈತ್ಯ ಫೇಸ್‌ಬುಕ್ ತಿಳಿಸಿದೆ. ಮೇ 15 ರಿಂದ ಜೂನ್ 15ರವರೆಗೆ ಬಳಕೆದಾರರಿಂದ ಸ್ವೀಕರಿಸಿದ ವಿವರಗಳು, ಸಂಸ್ಥೆ ಕೈಗೊಂಡ ಕ್ರಮಗಳ ಬಗ್ಗೆಯೂ ಇದರಲ್ಲಿ ಉಲ್ಲೇಖವಿರುತ್ತದೆ.
ಹೊಸ ಐಟಿ ನಿಯಮಗಳು ಮೇ 26ರಿಂದ ಜಾರಿಗೆ ಬಂದಿವೆ. ಈ ನಿಯಮವು ಪ್ರತಿ ತಿಂಗಳು ಸಾಮಾಜಿಕ ಸಂಸ್ಥೆಗಳು ಸ್ವೀಕರಿಸಿದ ದೂರು, ವಿವರಗಳನ್ನು ಹಾಗೂ ಕೈಗೊಂಡ ಕ್ರಮಗಳನ್ನು ಪ್ರಕಟಿಸಬೇಕಿದೆ. ಐಟಿ ನಿಯಮಗಳಿಗೆ ಅನುಸಾರವಾಗಿ, ನಾವು ಜುಲೈ 2ರಂದು ಮೇ 15ರಿಂದ ಜೂನ್ 15ರವರೆಗಿನ ಮಾಹಿತಿಯ ಮಧ್ಯಂತರ ವರದಿಯನ್ನು ಪ್ರಕಟಿಸುತ್ತೇವೆ.
ಈ ವರದಿಯು ನಮ್ಮ ಸ್ವಯಂಚಾಲಿತ ಪರಿಕರಗಳನ್ನು ಬಳಸಿಕೊಂಡು ಪೂರ್ವಭಾವಿಯಾಗಿ ತೆಗೆದು ಹಾಕಿದ ವಿಷಯದ ವಿವರಗಳನ್ನು ಒಳಗೊಂಡಿರುತ್ತದೆ ಎಂದು ಫೇಸ್‌ಬುಕ್ ವಕ್ತಾರರು ತಿಳಿಸಿದ್ದಾರೆ. ಅಂತಿಮ ವರದಿಯನ್ನು ಜುಲೈ 15ರಂದು ಪ್ರಕಟಿಸಲಾಗುವುದು, ಇದರಲ್ಲಿ ಬಳಕೆದಾರರ ದೂರುಗಳು ಮತ್ತು ಕ್ರಮಗಳ ಬಗ್ಗೆ ವಿವರವಿರುತ್ತದೆ.
ಜುಲೈ 15ರಂದು ಪ್ರಕಟಿಸುವ ವರದಿಯಲ್ಲಿ ವಾಟ್ಸ್‌ಆ್ಯಪ್‌ಗೆ ಸಂಬಂಧಿಸಿದ ದತ್ತಾಂಶವೂ ಇದ್ದು, ಇದನ್ನು ಪ್ರಸ್ತುತ ಮೌಲ್ಯೀಕರಿಸಲಾಗುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಜುಲೈ 2ರ ವರದಿಯು "ಮಧ್ಯಂತರ ವರದಿ" ಆಗಿರುತ್ತದೆ. "ನಾವು ಈ ಡೇಟಾವನ್ನು ಮೌಲ್ಯೀಕರಿಸುವ ಪ್ರಕ್ರಿಯೆಯಲ್ಲಿದ್ದೇವೆ'' ಎಂದಿದ್ದಾರೆ.
ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ದುರುಪಯೋಗ ತಡೆಗಟ್ಟಲು ಹೊಸ ಐಟಿ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಜತೆಗೆ ಬಳಕೆದಾರರಿಗೆ ಎದುರಾಗುವ ಸಮಸ್ಯೆಗಳಿಗೆ ದೃಢವಾದ ವೇದಿಕೆ ಒದಗಲಿದೆ. ಸಾಮಾಜಿಕ ಮಾಧ್ಯಮ ಕಂಪನಿಗಳು ಫ್ಲ್ಯಾಗ್ ಮಾಡಿದ ವಿಷಯವನ್ನು 36 ಗಂಟೆಗಳಲ್ಲಿ ತೆಗೆದು ಹಾಕಬೇಕಾಗುತ್ತದೆ. ಅಶ್ಲೀಲ ಚಿತ್ರಗಳನ್ನು ಅಪ್ಲೋಡ್ ಮಾಡಿದ 24 ಗಂಟೆಗಳೊಳಗೆ ತೆಗೆದು ಹಾಕಿ, ಕ್ರಮ ಕೈಗೊಳ್ಳಬೇಕಾಗುತ್ತದೆ.
ಫೇಸ್‌ಬುಕ್ ಇತ್ತೀಚೆಗೆ ಸ್ಪೂರ್ತಿ ಪ್ರಿಯಾರನ್ನು ಕುಂದು ಕೊರತೆ ಪರಿಶೀಲಿಸುವ ಅಧಿಕಾರಿಯಾಗಿ ನೇಮಿಸಿತ್ತು. ಅದೇ ರೀತಿ ಫೇಸ್‌ಬುಕ್ ಒಡೆತನದ ವಾಟ್ಸ್ಆ್ಯಪ್, ಪರೇಶ್ ಬಿಲಾಲ್ರನ್ನು ಅಧಿಕಾರಿನ್ನಾಗಿ ನೇಮಿಸಿತ್ತು.
ಇದನ್ನೂ ಓದಿ:ನೇರವಾಗಿ ಹಾಜರಾಗಿ ವಿವರಣೆ ನೀಡುವಂತೆ ಸಂಸದೀಯ ಸಮಿತಿಯಿಂದ FBಗೆ ಸೂಚನೆ ಸಾಧ್ಯತೆ
ಜಾಗತಿಕ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಭಾರತ ಪ್ರಮುಖ ಮಾರುಕಟ್ಟೆಯಾಗಿದೆ. ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಭಾರತದಲ್ಲಿ 53 ಕೋಟಿ ವಾಟ್ಸ್ಆ್ಯಪ್ ಬಳಕೆದಾರರು, 41 ಕೋಟಿ ಫೇಸ್‌ಬುಕ್ ಬಳಕೆದಾರರು, 21 ಕೋಟಿ ಇನ್‌ಸ್ಟಾಗ್ರಾಮ್ ಗ್ರಾಹಕರು ಇದ್ದರೆ, 1.75 ಕೋಟಿ ಖಾತೆದಾರರು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿದ್ದಾರೆ.