ನವದೆಹಲಿ : ಖಾದ್ಯ ತೈಲಗಳ ಪೂರೈಕೆ ಬಿಕ್ಕಟ್ಟಿನಿಂದ ತತ್ತರಿಸಿರುವ ವಿಶ್ವ ಮಾರುಕಟ್ಟೆಗೆ, ಕಚ್ಚಾ ತಾಳೆ ಎಣ್ಣೆ ರಫ್ತಿನ ಮೇಲಿನ ನಿಷೇಧವನ್ನು ತೆಗೆದು ಹಾಕುವ ಇಂಡೋನೇಷ್ಯಾ ನಿರ್ಧಾರವು ದೊಡ್ಡ ಪರಿಹಾರವಾಗಿದೆ. ವಿಶ್ವದಲ್ಲಿ ಅತಿ ಹೆಚ್ಚು ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುವ ಭಾರತದಂತಹ ದೇಶಕ್ಕೆ ಇದು ತುಂಬಾನೇ ಪ್ರಯೋಜನಕಾರಿಯಾಗಿದೆ. ಈ ವರ್ಷದ ಏಪ್ರಿಲ್ 28ರಿಂದ ತಾಳೆ ಎಣ್ಣೆ ರಫ್ತು ಮಾಡುವುದನ್ನು ಇಂಡೋನೇಷ್ಯಾ ನಿರ್ಬಂಧಿಸಿತ್ತು.
ಇಂಡೋನೇಷ್ಯಾ ವಿಶ್ವದಲ್ಲಿಯೇ ಅತಿದೊಡ್ಡ ಕಚ್ಚಾ ತಾಳೆ ಎಣ್ಣೆಯನ್ನು ಉತ್ಪಾದಿಸುವ ಮತ್ತು ರಫ್ತು ಮಾಡುವ ದೇಶವಾಗಿದೆ. ಇದು ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಪ್ರಮುಖ ಅಡುಗೆ ತೈಲವಾಗಿದೆ. ಭಾರತವು ತಿಂಗಳಿಗೆ 1 ರಿಂದ 1.1 ಮಿಲಿಯನ್ ಟನ್ಗಳಷ್ಟು ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳುತ್ತದೆ. ಒಂದು ವರ್ಷದಲ್ಲಿ 13 ರಿಂದ14 ಮಿಲಿಯನ್ ಟನ್ಗಳಷ್ಟು ಆಮದು ಮಾಡಿಕೊಳ್ಳುತ್ತದೆ. ಭಾರತದ ಖಾದ್ಯ ತೈಲ ಆಮದುಗಳಲ್ಲಿ ಪಾಮ್ ಆಯಿಲ್ ಆಮದು ಶೇ. 60ಕ್ಕಿಂತ ಹೆಚ್ಚಿದೆ.
ಇದನ್ನೂ ಓದಿ: ವಾರಾಣಸಿಯ ಜಿಲ್ಲಾ ನ್ಯಾಯಾಲಯಕ್ಕೆ ಜ್ಞಾನವಾಪಿ ಮಸೀದಿ ವಿವಾದ ವರ್ಗಾವಣೆ: ಸುಪ್ರೀಂ ಆದೇಶ
ಭಾರತದ ಖಾದ್ಯ ತೈಲ ಪೂರೈಕೆಯ ಅರ್ಧದಷ್ಟು ಭಾಗವನ್ನು ಇಂಡೋನೇಷ್ಯಾ ಹೊಂದಿದೆ. ಇಂಡೋನೇಷ್ಯಾ ರಫ್ತಿನ ಮೇಲೆ ನಿಷೇಧ ಹೇರಿದ್ದರಿಂದ ಏಪ್ರಿಲ್‌ನಲ್ಲಿ ತೈಲ ಮತ್ತು ಕೊಬ್ಬಿನ ಬೆಲೆಗಳು ಶೇ.17ರಷ್ಟು ಹೆಚ್ಚಾಗಿದ್ದವು. ಈ ವರ್ಷದ ಏಪ್ರಿಲ್‌ನಲ್ಲಿ ಭಾರತದ ಗ್ರಾಹಕ ಹಣದುಬ್ಬರವು 8 ವರ್ಷಗಳ ಗರಿಷ್ಠ 7.79%ರಷ್ಟು ಆಗಿತ್ತು. ಮೇ 23ರಿಂದ ಕಚ್ಚಾ ತೈಲದ ರಫ್ತನ್ನು ಪುನಾರಂಭಿಸಲು ಇಂಡೋನೇಷ್ಯಾ ನಿರ್ಧರಿಸಿದೆ.
ಹೀಗಾಗಿ, ಭಾರತ ಲಭ್ಯವಿರುವ ಸ್ಟಾಕ್ನನ್ನು ಖಾಲಿ ಮಾಡುವ ಮೊದಲು, ತಾಳೆ ಎಣ್ಣೆಯ ತಾಜಾ ಪೂರೈಕೆಗಳನ್ನು ಖರೀದಿಸಲು ಪ್ರಾರಂಭಿಸಲಿದೆ. ರಫ್ತು ನಿಷೇಧದ ಮೊದಲು ಭಾರತವು ತಿಂಗಳಿಗೆ ಸುಮಾರು 3 ರಿಂದ 3.25 ಲಕ್ಷ ಟನ್ ತಾಳೆ ಎಣ್ಣೆಯನ್ನು ಇಂಡೋನೇಷ್ಯಾದಿಂದ ಆಮದು ಮಾಡಿಕೊಳ್ಳುತ್ತಿತ್ತು. ಇದೇ ಪ್ರಮಾಣವನ್ನು ಇತರ ಪೂರೈಕೆದಾರರಾದ ಮಲೇಷ್ಯಾ ಮತ್ತು ಥೈಲ್ಯಾಂಡ್‌ನಿಂದ ಪಡೆಯಲಾಯಿತು.