ಹೈದರಾಬಾದ್: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಾಯಾಳುವಾಗಿ ವೀಲ್ಚೇರ್ನಲ್ಲಿ ಕುಳಿತು ಮತಯಾಚನೆ ಮಾಡಿದ ಏಕೈಕ ಕಾರಣದಿಂದಲೇ ಟಿಎಂಸಿ ಆ ಪರಿಯ ಅಭೂತ ಪೂರ್ವ ಬಹುಮತ ಪಡೆಯಲು ಸಾಧ್ಯವಾಯಿತಾ? ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಅಲ್ಪಸಂಖ್ಯಾತರ ಅಸ್ತಿತ್ವಕ್ಕೇ ಧಕ್ಕೆ ಬರಲಿದೆ ಎಂಬ ನಂಬಿಕೆಯನ್ನು ಆ ಸಮುದಾಯದಲ್ಲಿ ಬಲವಾಗಿ ಹುಟ್ಟು ಹಾಕಿದ್ದರಿಂದಲೇ ಟಿಎಂಸಿ ಪರ ಆ ಮಟ್ಟದ ಮತ ಧೃವೀಕರಣಗೊಂಡವಾ? ಒಂದಂತೂ ನಿಜ, ರಾಜ್ಯದಲ್ಲಿ ಸ್ಪರ್ಧೆಯಲ್ಲಿದ್ದ ಎಲ್ಲ ಸೆಕ್ಯೂಲರ್ ಹಣೆಪಟ್ಟಿಯ ಪಕ್ಷಗಳನ್ನು ಬಿಟ್ಟು ಸಾರಾಸಗಟಾಗಿ ಅಲ್ಪ ಸಂಖ್ಯಾತರು ಈ ಬಾರಿ ತೃಣಮೂಲ ಕಾಂಗ್ರೆಸ್ನ ಹಿಂದೆ ನಿಂತಿದ್ದರು.
ಮಮತಾ ಬ್ಯಾನರ್ಜಿ ಮಾತ್ರ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರದಂತೆ ತಡೆಯಬಲ್ಲರು ಎಂಬ ಬಲವಾದ ನಂಬಿಕೆಯಿಂದಲೇ ಅಲ್ಪಸಂಖ್ಯಾತರು ಮಮತಾ ದೀದಿಯನ್ನು ಸಂಪೂರ್ಣವಾಗಿ ಬೆಂಬಲಿಸಿದರು. ಇನ್ನು ಬಿಜೆಪಿ 2019ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಜಂಗಲ್ ಮಹಲ್ ಪ್ರದೇಶದಲ್ಲಿ ಸಂಪೂರ್ಣವಾಗಿ ಗೆಲುವು ಸಾಧಿಸಿತ್ತು. ಆದರೆ, ಈ ಬಾರಿ ಬಿಜೆಪಿ ಈ ಪ್ರದೇಶದಿಂದ ಪೂರ್ಣ ನಿರ್ನಾಮವಾಗಿದೆ. ಹೀಗೆ ಬಿಜೆಪಿ ಈ ಕ್ಷೇತ್ರದಿಂದ ಹೊರಹೋಗಲು ಸಾಕಷ್ಟು ಕಾರಣಗಳಿವೆಯಾದರೂ, ಈ ಪ್ರದೇಶದಲ್ಲಿನ ಮಹಿಳೆಯರು ಬಹುದೊಡ್ಡ ಸಂಖ್ಯೆಯಲ್ಲಿ ಹೊರಬಂದು ಟಿಎಂಸಿ ಪರವಾಗಿ ಮತ ಹಾಕಿ ಬಿಜೆಪಿ ಯಾವುದೇ ಕಾರಣಕ್ಕೂ ಗೆಲ್ಲದಂತೆ ನೋಡಿಕೊಂಡರು ಎಂಬುದು ಸಹ ಸತ್ಯ.
ನಿಜವಾದ ಅರ್ಥದಲ್ಲಿ ಈ ಬಾರಿಯ ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶವು ಬಿಜೆಪಿ ವಿರುದ್ಧ ಮಮತಾ ಪರವಾದ ಫಲಿತಾಂಶವಾಗಿದೆ. ಹೀಗಾಗಿಯೇ ಟಿಎಂಸಿ ಈ ಸಲ 2016ರ ಚುನಾವಣೆಗಿಂತಲೂ ಉತ್ತಮ ಸಾಧನೆ ತೋರಲು ಸಾಧ್ಯವಾಯಿತು. ಇನ್ನು ಎಡ ಪಕ್ಷಗಳು, ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಪಡೆಯುತ್ತಿದ್ದ ಇತರ ಸಮುದಾಯದ ಮತಗಳು ಸಾರಾಸಗಟಾಗಿ ಬಿಜೆಪಿ ಪರವಾಗಿ ಧೃವೀಕರಣಗೊಂಡಿದ್ದರಿಂದ ಪಶ್ಚಿಮ ಬಂಗಾಳದ ಚುನಾವಣಾ ನಕಾಶೆಯಿಂದಲೇ ಆ ಪಕ್ಷಗಳು ಕಾಣೆಯಾಗಿವೆ.
ಬಿಜೆಪಿ ಕೋಲ್ಕತ್ತಾದಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆಯುವ ನಿರೀಕ್ಷೆಯನ್ನು ಹೊಂದಿತ್ತಾದರೂ ಅಲ್ಲಿ ಅದಕ್ಕೆ ನಿರಾಸೆ ಎದುರಾಗಿದೆ. ಇತರ ಪಕ್ಷಗಳಿಂದ ಬಂದು ಬಿಜೆಪಿ ದೋಣಿ ಏರಿದವರು ಸಹ ಅಂಥ ಸಾಧನೆ ಮಾಡಲಾಗಲಿಲ್ಲ. ರಾಜಿಬ್ ಬ್ಯಾನರ್ಜಿ, ಬೈಶಾಲಿ ದಾಲ್ಮಿಯಾರಂಥ ಘಟಾನುಘಟಿ ನಾಯಕರು ಸೇರಿದಂತೆ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಬಹುತೇಕ ಶಾಸಕರು ಸೋತರು. ಆದರೆ ಟಿಎಂಸಿ ತೊರೆದು ಬಿಜೆಪಿಗೆ ಬಂದ ಸುವೇಂದು ಅಧಿಕಾರಿ ಮಾತ್ರ ಪಕ್ಷಕ್ಕೆ ಬಹುದೊಡ್ಡ ಲಾಭ ತಂದುಕೊಟ್ಟರು. ನಂದಿಗ್ರಾಮದಲ್ಲಿ ಮಮತಾ ದೀದಿಯನ್ನೇ ಸೋಲಿಸಿ ತೃಣಮೂಲ ಕಾಂಗ್ರೆಸ್ಸಿಗೆ ಆಘಾತ ನೀಡಿದರು.
ಕೇರಳದಲ್ಲೂ ಬಿಜೆಪಿ ಸ್ಥಿತಿ ಅಂಥ ಭಿನ್ನವಾಗಿಯೇನೂ ಇಲ್ಲ. ಇಲ್ಲಿನ ವಿಧಾನಸಭೆಯಲ್ಲಿ ಒಂದೇ ಒಂದು ಸ್ಥಾನವನ್ನೂ ಪಡೆಯದ ಬಿಜೆಪಿ ಇನ್ನೈದು ವರ್ಷ ವಿಧಾನಸಭೆಯಿಂದ ದೂರವೇ ಇರಬೇಕಿದೆ. ಕೇಸರಿ ಪಕ್ಷವು ಕೇರಳದಲ್ಲಿ ಅಧಿಕಾರಕ್ಕೆ ಬಂದರೆ ತಮ್ಮ ಬುಡಕ್ಕೆ ಕೊಡಲಿ ಪೆಟ್ಟು ಬೀಳಲಿದೆ ಎಂಬ ಹೆದರಿಕೆಯಿಂದ ಉತ್ತರ ಮತ್ತು ಮಧ್ಯ ಕೇರಳ ಭಾಗದ ಅಲ್ಪಸಂಖ್ಯಾತರು ಎಲ್ಡಿಎಫ್ ಪರವಾಗಿ ಬಂಡೆಗಲ್ಲಿನಂತೆ ನಿಂತು ಬಿಟ್ಟರು. ಸಾಮಾನ್ಯವಾಗಿ ಈ ಮತದಾರರು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಬೆಂಬಲಿಸುತ್ತಿದ್ದರೂ ಇವರು ಈ ಬಾರಿ ಎಲ್ಡಿಎಫ್ ಬಿಟ್ಟು ಕದಲಲಿಲ್ಲ. ಉತ್ತರ ಕೇರಳದ ಕ್ರಿಶ್ಚಿಯನ್ ಮತಗಳು ಸಹ ಎಲ್ಡಿಎಫ್ ಪರವಾಗಿಯೇ ಚಲಾವಣೆಗೊಂಡಿವೆ. ಹಿಂದೂ ಬಾಹುಳ್ಯ ಪ್ರದೇಶವಾದ ದಕ್ಷಿಣ ಕೇರಳದಲ್ಲಿಯೂ ಬಿಜೆಪಿ ತನ್ನ ಪರವಾದ ಅಲೆಯನ್ನು ಸೃಷ್ಟಿಸುವಲ್ಲಿ ವಿಫಲವಾಯಿತು.
ತಮಿಳು ನಾಡಿನ ಕಥೆ ನೋಡುವುದಾದರೆ ಅಲ್ಲಿಯೂ ಬಿಜೆಪಿಯ ಆಟ ನಡೆಯಲಿಲ್ಲ. ಡಿಎಂಕೆ ವಂಶಪಾರಂಪರ್ಯ ಆಡಳಿತಕ್ಕೆ ಮಣೆ ಹಾಕಿದೆ ಎಂಬ ಬಿಜೆಪಿ ವಾದವನ್ನು ಮತದಾರರು ತಿರಸ್ಕರಿಸಿದ್ದು ಮಾತ್ರವಲ್ಲದೆ, ಕರುಣಾನಿಧಿಯ ಎರಡನೇ ಪೀಳಿಗೆಯಾದ ಸ್ಟಾಲಿನ್ ಹಾಗೂ ಮೂರನೇ ಪೀಳಿಗೆಗೂ ಮತ ಹಾಕಿದರು. ಇನ್ನು ಜೆ. ಜಯಲಲಿತಾ ಅವರ ಕಾರಣದಿಂದ ಎಐಎಡಿಎಂಕೆ ರಾಜ್ಯದ ಮಹಿಳಾ ಮತಗಳನ್ನು ಬಹುದೊಡ್ಡ ಸಂಖ್ಯೆಯಲ್ಲಿ ಪಡೆಯುತ್ತಿತ್ತು. ಆದರೆ, ಜಯಲಲಿತಾ ಅನುಪಸ್ಥಿತಿಯಲ್ಲಿ ಆ ಎಲ್ಲ ಮತಗಳು ಡಿಎಂಕೆ ಗೆ ಬಂದಿರುವುದು ಸ್ಪಷ್ಟ.
ಅಸ್ಸೋಂ ಮಾತ್ರ ಈ ಬಾರಿ ಬಿಜೆಪಿಗೆ ಖುಷಿ ತಂದ ರಾಜ್ಯವಾಗಿದೆ. ಪಶ್ಚಿಮ ಬಂಗಾಳ ಹಾಗೂ ಕೇರಳದ ರೀತಿ ಬಿಜೆಪಿ ವಿರುದ್ಧ ಇಲ್ಲಿ ಅಲ್ಪಸಂಖ್ಯಾತ ಮತಗಳ ಧೃವೀಕರಣವಾಗಲಿಲ್ಲ. ಸ್ಥಳೀಯ ವಿಷಯಗಳ ಮೇಲೆ ಪ್ರಚಾರ ಮಾಡಿದ ಕಾಂಗ್ರೆಸ್ ಅದರಲ್ಲಿ ಸಫಲವಾಗದೇ ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿತು. ಕಾಂಗ್ರೆಸ್ಸಿನ ಸಿಎಎ ಮತ್ತು ಎನ್ಆರ್ಸಿ ವಿರೋಧಿ ಘೋಷಣೆಗಳು ಅಸ್ಸಾಮಿನ ಬಹಳಷ್ಟು ಸಮುದಾಯಗಳಿಗೆ ಹಿಡಿಸಲಿಲ್ಲ. ಸ್ಥಳೀಯ ಅಸ್ಸಾಮಿಗರ ರಕ್ಷಣೆಗಾಗಿ ಅಸ್ಸೋಂ ಒಪ್ಪಂದದ 6ನೇ ಅನುಬಂಧವನ್ನು ಜಾರಿಗೆ ತರುವುದಾಗಿ ಬಿಜೆಪಿ ವಾಗ್ದಾನ ಮಾಡಿದ್ದು ಸಹ ಅದಕ್ಕೆ ಸಾಕಷ್ಟು ಸಹಕಾರಿಯಾಯಿತು.