ಜೈಪುರ / ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವ ರೈತ ವಿರೋಧಿ ಮೂರು ಕೃಷಿ ಕಾನೂನುಗಳನ್ನು ರದ್ದು ಮಾಡಬೇಕೆಂದು ಆಗ್ರಹಿಸಿ ಕಳೆದ ನವೆಂಬರ್ 26 ರಿಂದ ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಇಂದೂ ಕೂಡ ಮುಂದುವರೆದಿದೆ.
ಈಗಾಗಲೇ ರೈತ ಸಂಘಟನೆಗಳ ಪ್ರತಿನಿಧಿಗಳು ಮತ್ತು ಸರ್ಕಾರದ ನಡುವೆ 6 ಸಭೆಗಳಾಗಿದ್ದು, 6 ಸಭೆಗಳೂ ವಿಫಲವಾಗಿವೆ. ಮಾತುಕತೆಗಳು ವಿಫಲವಾಗಿದ್ದರಿಂದ ದೆಹಲಿ ಗಡಿಗಳಲ್ಲಿ ರೈತರು ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ (ಜನವರಿ 4) 7ನೇ ಸುತ್ತಿನ ಸಭೆ ಕರೆಯಲಾಗಿದೆ.
ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯ ಬೇಕು. ರೈತರ ಎಲ್ಲ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ಕೊಡಬೇಕು. ಜೊತೆಗೆ ರೈತರಿಗೆ ಮಾರಕವಾಗಿರುವ ವಿದ್ಯುತ್ ಕಾನೂನನ್ನು ವಾಪಸ್ ಪಡೆಯಲೇಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ವರಾಜ್ ಇಂಡಿಯಾ ಸಂಘಟನೆಯ ಕನ್ವೀನರ್ ಯೋಗೇಂದ್ರ ಯಾದವ್, ಸರ್ಕಾರ ರೈತರ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದು, ಈ ಕುರಿತು ಜನರಲ್ಲಿ ಅಸಮಾಧಾನವಿದೆ. ಮಾಧ್ಯಮಗಳು ಸಹ ಏಕಪಕ್ಷೀಯವಾಗಿ ಸರ್ಕಾರದ ಪರ ಪ್ರಚಾರ ಮಾಡುತ್ತಿವೆ. ರೈತರಿಗೆ ಸಂಬಂಧಿಸಿದ ವಿಷಯಗಳ ಕುರಿತು ಸುಳ್ಳು ಮಾಹಿತಿ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಇನ್ನು ರೈತರು ನಡೆಸುತ್ತಿರುವ ಹೋರಾಟ ಕೇವಲ ಉತ್ತರ ಭಾರತಕ್ಕೆ ಮಾತ್ರ ಸೀಮಿತವಾಗಿದೆ ಎಂಬುದು ನಿಜವಲ್ಲ, ದೇಶಾದ್ಯಂತ ರೈತರು ಆಂದೋಲನ ನಡೆಸುತ್ತಿದ್ದಾರೆ. ಸರ್ಕಾರ ರೈತರ ಮನವಿಗಳಿಗೆ ಸ್ಪಂದಿಸದಿದ್ದರೆ ಈ ಹೋರಾಟವನ್ನು ಇನ್ನೂ ತೀವ್ರಗೊಳಿಸಲಾಗುವುದು. ಜನವರಿ 4 ರಂದು ಸಭೆ ಕರೆಯಲಾಗಿದೆ. ಸಭೆಯ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.