ಭಿವಾನಿ(ಹರಿಯಾಣ): ನಿವೃತ್ತ ಸೈನಿಕರೊಬ್ಬರಿಗೆ ಅದೃಷ್ಟ ಖುಲಾಯಿಸಿದ್ದು, ರಾತ್ರೋರಾತ್ರಿ ಕೋಟ್ಯಧಿಪತಿಯಾಗಿರುವ ಘಟನೆ ಹರಿಯಾಣದ ಭಿವಾನಿಯಲ್ಲಿ ನಡೆದಿದೆ. ಭಿವಾನಿಯ ಬರ್ದು ಮೊಘಲ್ ಗ್ರಾಮದ ಮಾಜಿ ಸೈನಿಕ ಅತ್ತರ್ ಸಿಂಗ್ ನಾಗಲ್ಯಾಂಡ್ ಸರ್ಕಾರ ನಡೆಸುವ ಲಾಟರಿಯಲ್ಲಿ ಬರೋಬ್ಬರಿ 5 ಕೋಟಿ ರೂಪಾಯಿ ಗೆದ್ದಿದ್ದಾರೆ.
ಲಾಟರಿಗಾಗಿ ಇದುವರೆಗೆ ಸುಮಾರು 10 ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ. ಈ ವೇಳೆ, ಅನೇಕ ಸಣ್ಣ ಬಹುಮಾನಗಳು ಬಂದಿವೆ. ಆದರೆ, 15 ವರ್ಷಗಳ ಪ್ರಯತ್ನದ ನಂತರ ಇದೀಗ 5 ಕೋಟಿ ರೂಪಾಯಿಗಳ ಬಹುಮಾನ ಬಂದಿದೆ. ಈ ಲಾಟರಿ ಗೆದ್ದ ನಂತರವೂ ಸರಳ ಜೀವನ ನಡೆಸಲು ಬಯಸುತ್ತೇನೆ ಎಂದು ಅತ್ತರ್ ಸಿಂಗ್ ಹೇಳಿದ್ದಾರೆ.
ಲಾಟರಿಯಲ್ಲಿ ಬಂದಿರುವ 5 ಕೋಟಿ ರೂಪಾಯಿಗಳಲ್ಲಿ ಸ್ವಲ್ಪ ಭಾಗವನ್ನು ಸಮಾಜ ಸೇವೆಗೆ ಬಳಸುತ್ತೇನೆ. ನಾನು 2007ರಲ್ಲಿ ಸೇನೆಯಿಂದ ನಿವೃತ್ತಿ ಹೊಂದಿದ್ದೇನೆ. ಆ ನಂತರ ಒಂದಿಷ್ಟು ಕೆಲಸ ಮಾಡುವ ಯೋಚನೆ ಬಂತು. ಆಗ ಲಾಟರಿ ಖರೀದಿಸಲು ಆರಂಭಿಸಿದೆ. ತನಗೆ ಇಬ್ಬರು ಗಂಡು ಮಕ್ಕಳಿದ್ದು, ಅವರಿಬ್ಬರೂ ಸೇನೆಯಲ್ಲಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.
ಸುಮಾರು 6 ತಿಂಗಳ ಹಿಂದೆಯೂ ಇವರಿಗೆ 90 ಸಾವಿರ ರೂಪಾಯಿಯ ಲಾಟರಿ ಬಂದಿತ್ತು. ಆದರೆ, ಅದು ಹೇಳಿಕೊಳ್ಳುವಷ್ಟು ಖುಷಿ ಕೊಟ್ಟಿರಲಿಲ್ಲ. ದೊಡ್ಡ ಮೊತ್ತದ ಲಾಟರಿ ಹೊಡೆಯುವವರೆಗೂ ತನ್ನ ಪ್ರಯತ್ನವನ್ನು ಮುಂದುವರಿಸುವುದಾಗಿ ಅತ್ತರ್ ಸಿಂಗ್ ಮನಸ್ಸಿನಲ್ಲಿಯೇ ನಿರ್ಧರಿಸಿದ್ದರಂತೆ.
15 ವರ್ಷಗಳ ನಂತರ ಈಗ ಅವರ ಕನಸು ನನಸಾಗಿದೆ. 5 ಕೋಟಿ ರೂಪಾಯಿಗಳ ಇಷ್ಟು ಹಣ ಖರ್ಚು ಮಾಡಲು ಇದುವರೆಗೆ ಯಾವುದೇ ಯೋಜನೆ ಮಾಡಿಲ್ಲ ಎಂದು ಈ ಮಾಜಿ ಸೇನಾನಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ಡಿಸೆಂಬರ್ 24 ರಂದು ಕಿಲ್ಲನ್‌ವಾಲಿಯಿಂದ ಡಿಯರ್ ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಬಂಪರ್ ಲಾಟರಿಯ ಐದು ಟಿಕೆಟ್‌ಗಳನ್ನು 10 ಸಾವಿರ ರೂಪಾಯಿಗೆ ಖರೀದಿಸಿದ್ದೇನೆ. ಜನವರಿ 1 ರಂದು ಫಲಿತಾಂಶ ಅಂತರ್ಜಾಲದಲ್ಲಿ ಬಂದಾಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಲಾಟರಿಯನ್ನು ನಗದೀಕರಿಸಲು ಸರ್ಕಾರ ಹೇಳಿದ ಎಲ್ಲಾ ದಾಖಲೆಗಳೊಂದಿಗೆ ಕೋಲ್ಕತ್ತಾಗೆ ಹೋಗಬೇಕಾಗುತ್ತದೆ.
ಅಲ್ಲಿ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ ಒಂದು ತಿಂಗಳ ನಂತರ ಲಾಟರಿ ಮೊತ್ತವನ್ನು ಅವರ ಖಾತೆಗೆ ಕಳುಹಿಸಲಾಗುತ್ತದೆ. ಒಟ್ಟು 5 ಕೋಟಿ ರೂಪಾಯಿಗಳ ಮೊತ್ತದಲ್ಲಿ ಶೇ.30 ರಷ್ಟು ತೆರಿಗೆ ಕಡಿತದ ಬಳಿಕ ಇವರ ಖಾತೆಗೆ 3.5 ಕೋಟಿ ರೂಪಾಯಿ ಜಮೆಯಾಗಲಿದೆ.
ಇದನ್ನೂ ಓದಿ: ಅನ್ನದಾತನಿಗೆ 50 ಸಾವಿರ ಕೋಟಿ ಕೊಟ್ಟ ಸರ್ಕಾರ... ಈ ವಾರವಿಡೀ ರೈತ ಬಂಧು ಆಚರಣೆ