ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ ಅವರ ಪುತ್ರಿ ಶಸ್ತ್ರಚಿಕಿತ್ಸೆ ಮೂಲಕ ಲಿಂಗ ಪರಿವರ್ತನೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಈ ಮೂಲಕ ಸುಚೇತನ್ ಆಗಿ ಪರಿವರ್ತನೆ ಹೊಂದುವುದಾಗಿ ಮಾಜಿ ಸಿಎಂ ಭಟ್ಟಾಚಾರ್ಯ ಪುತ್ರಿ ಸುಚೇತನಾ ಭಟ್ಟಚಾರ್ಯ ಘೋಷಣೆ ಮಾಡಿದ್ದಾರೆ.
ಇತ್ತೀಚೆಗೆ LGBTQ ಸಮುದಾಯದ ಜೀವನೋಪಾಯದ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಅವರು, ನಾನು ಪುರುಷ ಎಂದು ಗುರುತಿಸಿಕೊಂಡಿದ್ದೇನೆ, ದೈಹಿಕವಾಗಿಯೂ ಪುರುಷನಾಗಲು ಇಚ್ಛಿಸುತ್ತೇನೆ ಎಂದು ತಿಳಿಸಿದ್ದಾರೆ. ಸುಚೇತನಾ ಅವರು ಲಿಂಗ ಪರಿವರ್ತನೆಗೆ ಬೇಕಾದ ಎಲ್ಲ ರೀತಿಯ ಕಾನೂನು ಸಲಹೆಗಳನ್ನು ಪಡೆದುಕೊಂಡಿದ್ದಾರೆ. ಇದಕ್ಕೆ ಬೇಕಾದ ಪ್ರಮಾಣ ಪತ್ರಗಳಿಗಾಗಿ ಮನೋವೈದ್ಯರನ್ನು ಸಂಪರ್ಕಿಸಿರುವುದಾಗಿಯೂ ತಿಳಿದುಬಂದಿದೆ.
ಈ ಬಗ್ಗೆ LGBTQ ಕಾರ್ಯಕರ್ತೆ ಸುಪ್ರವಾ ರಾಯ್ ಅವರು ಮೊದಲು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ತಮ್ಮ ಪೋಸ್ಟ್ನಲ್ಲಿ ಸುಚೇತನಾ ತನ್ನನ್ನು ತಾನು "ಟ್ರಾನ್ಸ್‌ಮ್ಯಾನ್" ಎಂದು ಘೋಷಿಸಿಕೊಂಡಿದ್ದಾರೆ. ಇನ್ನು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಯ ನಂತರ ಅವಳು 'ಸುಚೇತನ್' ಎಂದು ಕರೆಯಲ್ಪಡುತ್ತಾಳೆ ಎಂದು ತಿಳಿಸಿದ್ದರು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸುಚೇತನಾ, “ನನ್ನ ಪೋಷಕ ಗುರುತು (identity) ಅಥವಾ ಕುಟುಂಬದ ಗುರುತು ನನಗೆ ದೊಡ್ಡ ವಿಷಯವಲ್ಲ. ನಾನು ನನ್ನ LGBTQ ಚಳುವಳಿಯ ಭಾಗವಾಗಿ ಲಿಂಗ ಪರಿವರ್ತನೆ ಮಾಡಿಕೊಳ್ಳುತ್ತಿದ್ದೇನೆ. ಟ್ರಾನ್ಸ್-ಮ್ಯಾನ್ ಆಗಿ ನಾನು ಪ್ರತಿದಿನ ಎದುರಿಸುತ್ತಿರುವ ಸಾಮಾಜಿಕ ಕಿರುಕುಳವನ್ನು ತಡೆಯಲು ಬಯಸುತ್ತೇನೆ" ಎಂದು ಹೇಳಿದ್ದಾರೆ.
"ನಾನು ಈಗ ವಯಸ್ಕಳಿದ್ದೇನೆ. ನನಗೆ ಈಗ 41 ವರ್ಷ. ಇದರಿಂದಾಗಿ ನನ್ನ ಜೀವನಕ್ಕೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳಬಹುದು. ಹಾಗೆಯೇ ಲಿಂಗ ಪರಿವರ್ತನೆಯ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ದಯವಿಟ್ಟು ಈ ವಿಷಯದಲ್ಲಿ ನನ್ನ ಪೋಷಕರನ್ನು ಎಳೆದು ತರಬೇಡಿ. ಮಾನಸಿಕವಾಗಿ ತನ್ನನ್ನು ತಾನು ಪುರುಷನೆಂದು ಪರಿಗಣಿಸುವವರು ಕೂಡ ಪುರುಷನೇ ಆಗುತ್ತಾನೆ. ನಾನು ಮಾನಸಿಕವಾಗಿ ಪುರುಷ ಎಂದು ಪರಿಗಣಿಸಿದ್ದೇನೆ. ಈಗ ಭೌತಿಕವಾಗಿಯೂ ನಾನು ಪುರುಷನಾಗಬೇಕೆಂದು ಬಯಸುತ್ತೇನೆ ಎಂದು ಹೇಳಿದ್ದಾರೆ. ನಾನು ಗಂಡು ಎಂಬ ವಿಚಾರವು ನನ್ನ ತಂದೆ ಬಾಲ್ಯದಿಂದಲೂ ತಿಳಿದಿತ್ತು ಎಂದು ಸುಚೇತನಾ ಇದೇ ವೇಳೆ ಹೇಳಿಕೊಂಡಿದ್ದಾರೆ.
“ಲಿಂಗ ಪರಿವರ್ತನೆ ಬಗ್ಗೆ ನಾನು ದೃಢ ನಿರ್ಧಾರ ಕೈಗೊಂಡಿದ್ದೇನೆ. ಈ ಬಗ್ಗೆ ನಾನು ಹೋರಾಟ ನಡೆಸುತ್ತೇನೆ. ಆ ಧೈರ್ಯ ನನ್ನಲ್ಲಿದೆ. ಯಾರು ಏನೇ ಹೇಳಿದರೂ ನಾನು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಎಲ್ಲರ ಪ್ರಶ್ನೆಗಳಿಗೂ ಉತ್ತರಿಸಲು ನಾನು ಸಿದ್ಧ” ಎಂದಿದ್ದಾರೆ.
ಇದೇ ವೇಳೆ LGBTQ ಸಮುದಾಯವು ಅವರ ಗುರುತಿನ ಬಗ್ಗೆ ಎಂದಿಗೂ ನಾಚಿಕೆಪಡಬಾರದು. ನಾನು ಎಲ್ಲರಿಗೂ ಧೈರ್ಯದಿಂದ ಇರಲು ಕೇಳಿಕೊಳ್ಳುತ್ತೇನೆ. ಇದರಿಂದಾಗಿ ಬಹುಶಃ ನನ್ನ ಹೆಸರು ಮತ್ತು ನನ್ನ ಹೆತ್ತವರ ಬಗ್ಗೆ ಕೆಲವು ವಿವಾದಗಳು ಉಂಟಾಗಬಹುದು. ಆದರೆ ನಾನು ಪದೇ ಪದೇ ಇದನ್ನೇ ಹೇಳುತ್ತೇನೆ, ದಯವಿಟ್ಟು ಎಲ್ಲರೂ ಅರ್ಥಮಾಡಿಕೊಳ್ಳಿ ಎಂದು ಹೇಳಿದರು.
ಇದನ್ನೂ ಓದಿ : ಜನ್ಮದಿನದಂದೇ ಲಿಂಗ ಪರಿವರ್ತನೆ.. ಆರಾಮದಾಯಕವಾಗಿ ಬದುಕಲು ಪುರುಷನಾಗಿ ಬದಲಾದ ಮಹಿಳೆ!