ಕೋಲ್ಕತ್ತಾ (ಪಶ್ಚಿಮ ಬಂಗಾಳ): ತನ್ನ ಪತ್ನಿ ಹಾಗೂ ಮಗಳನ್ನು ಕತ್ತು ಕೊಯ್ದು ಕೊಲೆ ಮಾಡಿದ ನಂತರ ನಿವೃತ್ತ ಯೋಧರೊಬ್ಬರು ರೈಲಿನಡಿ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಘಟನೆ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಶುಕ್ರವಾರ ನಡೆದಿದೆ. ಗೌತಮ್ ಬ್ಯಾನರ್ಜಿ (48) ಮತ್ತು ಪತ್ನಿ ದೇಬಿಕಾ ಬ್ಯಾನರ್ಜಿ (44) ಹಾಗೂ ಪುತ್ರಿ ದಿಶಾ ಬ್ಯಾನರ್ಜಿ (19) ಮೃತರು ಎಂದು ಗುರುತಿಸಲಾಗಿದೆ.
ಇಲ್ಲಿನ ಡುಮ್ ಡುಮ್ ಪ್ರದೇಶದಲ್ಲಿ ಗೌತಮ್ ಬ್ಯಾನರ್ಜಿ ಕುಟುಂಬ ವಾಸವಾಗಿತ್ತು. ಮನೆಯಲ್ಲಿ ಮೊದಲಿಗೆ ಹರಿತ ಆಯುಧದಿಂದ ಪತ್ನಿ ಹಾಗೂ ಪುತ್ರಿಯನ್ನು ಕೊತ್ತು ಕೊಯ್ದು ಗೌತಮ್ ಹತ್ಯೆ ಮಾಡಿದ್ದಾರೆ. ನಂತರ ಹೊರಗಡೆ ಬಂದು ಮಧ್ಯಮಮಾರ್ಗ ರೈಲ್ವೆ ನಿಲ್ದಾಣದ ಸಮೀಪ ಬರುತ್ತಿದ್ದ ಸಬ್ ಅರ್ಬನ್ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೆ ಕೌಟುಂಬಿಕ ಸಮಸ್ಯೆ ಕಾರಣ: ನಿವೃತ್ತ ಯೋಧರಾಗಿದ್ದ ಬ್ಯಾನರ್ಜಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಮನೆಯಲ್ಲಿ ದಂಪತಿ ನಡುವೆ ಆಗಾಗ್ಗೆ ಜಗಳವಾಗುತ್ತಲೇ ಇತ್ತು. ಈ ಕೌಟುಂಬಿಕ ಸಮಸ್ಯೆ ಕಾರಣದಿಂದಲೇ ಪತ್ನಿ ಹಾಗೂ ಪುತ್ರಿಯನ್ನು ಕೊಲೆ ಮಾಡಿರುವ ಕುರಿತು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದ ನಂತರ ಪೊಲೀಸ್ ಸಿಬ್ಬಂದಿ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆಗ ಅಲ್ಲಿ ಇಬ್ಬರು ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ.
ಹತ್ಯೆ ನಂತರ ಮನೆಯಲ್ಲೇ ಆತ್ಮಹತ್ಯೆ ಯತ್ನ: ಗುರುವಾರ ರಾತ್ರಿ ರಾತ್ರಿಯೇ ಕುಡಿತ ಮತ್ತಿನಲ್ಲಿ ಪತ್ನಿ ಹಾಗೂ ಮಗಳನ್ನು ಗೌತಮ್ ಬ್ಯಾನರ್ಜಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇಬ್ಬರು ಮಲಗಿದ್ದಾಗ ತರಕಾರಿ ಕತ್ತರಿಸುವ ಚಾಕುವಿನಿಂದ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ನಂತರ ಮನೆಯಲ್ಲೇ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ, ಅದು ಸಾಧ್ಯವಾಗಿಲ್ಲ. ಹೀಗಾಗಿ ಮನೆಗೆ ಬೀಗ ಹಾಕಿಕೊಂಡು ಶುಕ್ರವಾರ ಬೆಳಗ್ಗೆ ಮಧ್ಯಮಮಾರ್ಗ ರೈಲ್ವೆ ನಿಲ್ದಾಣದ ಬಳಿ ಬಂದಿದ್ದಾನೆ ಎಂದು ತನಿಖೆಯಲ್ಲಿ ಗೊತ್ತಾಗಿದೆ.
ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮನೆಯಲ್ಲಿ ಹತ್ಯೆಗೆ ಬಳಸಿದ ಆಯುಧವನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ, ಮನೆಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಯ ಕುಟುಂಬಸ್ಥರು ಹಾಗೂ ಅತ್ತೆ, ಮಾವನ ಮನೆಯವರ ವಿಚಾರಣೆ ನಡೆಸಲಾಗುತ್ತಿದೆ. ಡುಮ್ ಡುಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೀದಿ ನಾಯಿ ರಕ್ಷಿಸಿದ ಕುಟುಂಬದ ಮೇಲೆ ದ್ವೇಷ: ಬಾಲಕನ ಥಳಿಸಿ ಕೊಂದ ನೆರೆಮನೆ ವ್ಯಕ್ತಿ