ನಾವು ಅಂಬೆಗಾಲಿಡುತ್ತಾ, ತೊದಲು ನುಡಿಗಳನ್ನಾಡುತ್ತಿರುವಾಗಲೇ ತನ್ನ ಕನಸಿನ ಸಾಮ್ರಾಜ್ಯದಲ್ಲಿ ನಮ್ಮನ್ನು ಸಿಂಹಾಸನದ ಮೇಲೆ ಕೂರಿಸುವವ ಅಪ್ಪ.. ಮಗುವಿನ ಪಾಲನೆಯಲ್ಲಿ ತಾಯಿ ಪಾತ್ರ ಅದೆಷ್ಟು ದೊಡ್ಡದೋ ತಂದೆಯ ಪಾತ್ರವೂ ಅಷ್ಟೇ ಮಹತ್ವದ್ದು. ಮಕ್ಕಳಿಗೆ ಅಮ್ಮನ ಮಡಿಲಷ್ಟೇ ಅಪ್ಪನ ಹೆಗಲು ವಾತ್ಸಲ್ಯ ನೀಡುತ್ತದೆ. ಹೆಗಲ ಮೇಲೆ ಕೂರಿಸಿಕೊಂಡು ಪ್ರಪಂಚ ತೋರಿಸುವ ತಂದೆಗೆ ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು.
ಪ್ರತಿವರ್ಷ ಜೂನ್ ಮೂರನೇ ಭಾನುವಾರದಂದು ವಿಶ್ವ ಅಪ್ಪಂದಿರವನ್ನು ಆಚರಿಸಲಾಗುತ್ತದೆ. ಇದು ಅಪ್ಪನಿಗೆ ಕೇವಲ ಶುಭಕೋರುವಷ್ಟೇ ದಿನವಲ್ಲ. ತಂದೆಯ ತ್ಯಾಗವನ್ನು ಸ್ಮರಿಸುವ ದಿನವೂ ಹೌದು.
ಜೇಬು ತೂತಾದರೂ ಬತ್ತದ ಛಲ
ಅಪ್ಪನ ಕೈಗಳು ಕೆಸರಾದಾಗಲೇ ಮಕ್ಕಳ ಭವಿಷ್ಯ ರೂಪುಗೊಳ್ಳುತ್ತದೆ. ಅದೆಷ್ಟೋ ಬಾರಿ ಜೇಬಲ್ಲಿ ದುಡ್ಡಿಲ್ಲದಿದ್ದರೂ, ಸಾಲಗಾರರ ಒತ್ತಡಕ್ಕೆ ಬೇಸತ್ತಿದ್ದರೂ ಮಕ್ಕಳ ಹೊಟ್ಟೆ-ಬಟ್ಟೆಗಾಗಿ ದುಡಿದು, ತನ್ನ ಕನಸಿನ ಸಾಮ್ರಾಜ್ಯ ಕಟ್ಟುವ ತಂದೆಯ ಛಲ ಬತ್ತುವುದಿಲ್ಲ. ಕೆಸರು ಕೈಗಳು ಪಟ್ಟ ಶ್ರಮಕ್ಕೆ ನಾವು ಪ್ರತಿಫಲ ನೀಡಲೇ ಬೇಕು. ಅವರ ತ್ಯಾಗ ಅಮೂಲ್ಯವಾದದು. ಅಪ್ಪನ ಋಣ ತೀರಿಸಲಾಗುವುದಿಲ್ಲ, ಆದರೆ ವಯಸ್ಸಾಗುವ ಮುನ್ನವೇ ತಂದೆಯ ಮುಖದಲ್ಲಿ ಸುಕ್ಕುಗಟ್ಟುವುದನ್ನು ನಾವು ತಡೆಯಬಹುದು. ಅಂದರೆ ಅವರನ್ನು ನೋಯಿಸದೆ ಸಂತೋಷದಿಂದ ನೋಡಿಕೊಳ್ಳಬಹುದು.
ಹೆತ್ತವರ ನೋಯಿಸದಿರಿ - ಕೈಬಿಡದಿರಿ
ಇಂದು ಜಗತ್ತು ಬದಲಾಗಿದೆ. ಅನೇಕ ಮಕ್ಕಳಿಂದು ತಮ್ಮ ಜೀವನದ ಹಾದಿ ಸುಗಮವಾಗುತ್ತಿದ್ದಂತೆಯೇ ಹೆತ್ತವರನ್ನು ಅವರ ವೃದ್ಧಾಪ್ಯದಲ್ಲಿ ಕೈ ಬಿಡುತ್ತಿದ್ದಾರೆ. ಆಗ ನಮಗೆ ಅಪ್ಪ-ಅಮ್ಮನ ಕೈ ತುತ್ತು, ಪ್ರೀತಿ-ವಾತ್ಸಲ್ಯ ಯಾವುದೂ ನೆನಪಿಗೆ ಬರಲ್ಲ. ನಾವು ಸೋತಾಗ ನಮ್ಮನ್ನು ಬಡಿದೇಳಿಸಿದ್ದ ಅಪ್ಪನನ್ನು ಎಂದಿಗೂ ಮರೆಯದಿರಿ. ನಾವು ತಪ್ಪು ಮಾಡಿದಾಗ ಶಿಕ್ಷೆ ನೀಡಿ ನಮ್ಮನ್ನು ತಿದ್ದಿದ ತಂದೆಗೆ ಇಳಿ ವಯಸ್ಸಿನಲ್ಲಿ ಅವರ ಕೈ ಬಿಟ್ಟು ಅವರಿಗೆ ಶಿಕ್ಷೆ ನೀಡುವ ಮಹಾತಪ್ಪು ಮಾಡದಿರಿ.
ಅನಾಥರನ್ನಾಗಿಸಿದ ಕೊರೊನಾ
ಎಲ್ಲಾ ತಂದೆಯಂದಿರಿಗೂ ತನ್ನ ಮಗಳೇ ರಾಜಕುಮಾರಿ.. ಎಲ್ಲಾ ಗಂಡು ಮಕ್ಕಳಿಗೂ ತನ್ನ ಅಪ್ಪನೇ ಸೂಪರ್ ಹೀರೋ. ಕಳೆದ ಒಂದೂವರೆ ವರ್ಷದಿಂದ ಜಗತ್ತನ್ನು ಅಂಟಿಕೊಂಡಿರುವ ಮಹಾಮಾರಿ ಕೊರೊನಾ ಅದೆಷ್ಟೋ ಮಕ್ಕಳನ್ನು ಇಂದು ಅನಾಥರನ್ನಾಗಿಸಿದೆ. ಕೋವಿಡ್ ಕಾರಣದಿಂದಲ್ಲದೇ ಹಲವಾರು ದುರಂತ, ಅವಘಡಗಳಿಂದ ಬಾಲ್ಯದಲ್ಲಿಯೇ ಪೋಷಕರನ್ನು ಕಳೆದುಕೊಂಡ ಮಕ್ಕಳಿದ್ದಾರೆ. ಹೆತ್ತವರನ್ನು ಕಳೆದುಕೊಂಡಿರೆಂದು ದುಃಖಿಸಬೇಡಿ. ಒಮ್ಮೆ ನಿಮ್ಮ ಸುತ್ತಮುತ್ತ ನೋಡಿ. ಅಪ್ಪ-ಅಮ್ಮನ ಪ್ರೀತಿ ತೋರುವ ಅನೇಕ ಜನರಿದ್ದಾರೆ. ಅವರೇ ನಿಮಗೆ ಸೂಪರ್ ಮಾಮ್, ಸೂಪರ್ ಹೀರೋ.. ಅಪ್ಪನ ಪ್ರೀತಿ ತೋರುವ ಆ ವ್ಯಕ್ತಿಗೂ ಹೇಳಿ Happy Father's Day ಎಂದು.. I Love You Pa ಎಂದು..