ತ್ರಿಶೂರ್(ಕೇರಳ): ನಿನ್ನೆ ಬೆಳಗ್ಗೆ ಹೈದರಾಬಾದ್‌ನಲ್ಲಿ ರಸ್ತೆ ದಾಟುತ್ತಿದ್ದಾಗ ಕಾರು ಅಪಘಾತದಲ್ಲಿ ಸಾವನ್ನಪ್ಪಿದ 'ಈಟಿವಿ ಭಾರತ' ಕೇರಳ ವಿಭಾಗದ ಕಂಟೆಂಟ್ ಎಡಿಟರ್, ಭರವಸೆಯ ಪ್ರತಿಭಾನ್ವಿತ ಪತ್ರಕರ್ತೆ ನಿವೇದಿತಾ ಸೂರಜ್ (26) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ಹಿಂದೂ ಧಾರ್ಮಿಕ ವಿಧಿವಿಧಾನಗಳ ಮೂಲಕ ತ್ರಿಶೂರ್‌ನಲ್ಲಿರುವ ಅವರ ಸ್ವಗೃಹದ ಸಮೀಪ ನೆರವೇರಿತು.
ಬೆಳಗ್ಗೆ 10:30 ರ ಸುಮಾರಿಗೆ ತ್ರಿಶೂರ್ ಜಿಲ್ಲೆಯ ಇರಿಂಗಲಕುಡದ ಅವರ ನಿವಾಸ ವಿರುಪತಿಪರಂಬಿಲ್ ಮನೆಯ ಬಳಿ ನಡೆದ ಅಂತ್ಯಕ್ರಿಯೆಯಲ್ಲಿ ಕುಟುಂಬಸ್ಥರು, ಬಂಧು ವರ್ಗ ಹಾಗು ಸ್ನೇಹಿತರು ಪಾಲ್ಗೊಂಡಿದ್ದರು. ಸಹೋದರ ಶಿವಪ್ರಸಾದ್ ತನ್ನ ಸಹೋದರಿಯ ಚಿತೆಯ ಸುತ್ತ ಭಾರವಾದ ಹೆಜ್ಜೆಗಳನ್ನಿಟ್ಟು ನೋವಿನ ಮಡುವಿನಲ್ಲಿ ಅಗ್ನಿಸ್ಪರ್ಶ ಮಾಡಿದರು. ಇದಕ್ಕೂ ಮುನ್ನ, 'ಈಟಿವಿ ಭಾರತ' ಪರವಾಗಿ ಕೇರಳ ವಿಭಾಗದ ಮುಖ್ಯಸ್ಥ ಕೆ.ಪ್ರವೀಣ್ ಕುಮಾರ್ ಹಾಗೂ ಕೇರಳ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಜ್ಯಾಧ್ಯಕ್ಷೆ ಎಂ.ವಿ.ವಿನೀತಾ ಅಂತಿಮ ನಮನ ಸಲ್ಲಿಸಿದರು.
ಇದನ್ನೂ ಓದಿ: ಈಟಿವಿ ಭಾರತದ ಪತ್ರಕರ್ತೆ ನಿವೇದಿತಾ ಸೂರಜ್ ರಸ್ತೆ ಅಪಘಾತದಲ್ಲಿ ನಿಧನ
ನಿನ್ನೆ ಬೆಳಗ್ಗೆ 5 ಗಂಟೆಗೆ ಹೈದರಾಬಾದ್ನ ಹಯತ್ ನಗರದ ಭಾಗ್ಯಲತಾ ಎಂಬಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ನಿವೇದಿತಾ ಮೃತಪಟ್ಟಿದ್ದರು. ಕಚೇರಿಗೆ ತೆರಳಲು ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದಾಗ ಎಲ್ ಬಿ ನಗರದಿಂದ ಭಾಗ್ಯಲತಾ ಕಡೆಗೆ ವೇಗವಾಗಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದು, ತೀವ್ರ ರಕ್ತಸ್ರಾವವಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅಪಘಾತ ಸಂಭವಿಸಿದ ತಕ್ಷಣ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ವಿರುದ್ಧ ದಿಕ್ಕಿಗೆ ಸ್ಕಿಡ್ ಆಗಿ ಪಲ್ಟಿಯಾಗಿತ್ತು.
ಹಯತ್ ನಗರ ಪೊಲೀಸರು ಕಾರನ್ನು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.